Coffee powder:ಹಿಂದಿನ ಕಾಲದಿಂದಲೂ ಜನರು ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಲೇ ಬಂದಿದ್ದಾರೆ. ಚರ್ಮದ ಕಾಂತಿಯನ್ನು ಹೆಚ್ಚಿಸಲು ಹಲವು ವಿಧಾನಗಳಲ್ಲಿ ಪ್ರಯತ್ನಿಸುತ್ತಿದ್ದಾರೆ. ಜನರು ಮೊದಲಿನಿಂದಲೂ ಪರಿಸರದಲ್ಲಿ ಸಿಗುವ ಹೂವು, ತರಕಾರಿಗಳನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರು. ಆಧುನಿಕತೆ ಹೆಚ್ಚುತ್ತಿದ್ದಂತೆಯೇ ಫೇಸ್ ಸ್ಕ್ರಬ್, ಫೇಸ್ ಪ್ಯಾಕ್ ಈ ಸ್ಥಾನವನ್ನು ಪಡೆದುಕೊಂಡಿತು. ಆದರೆ ಇದರಲ್ಲೂ ಹಿಂದಿನ ಕಾಲದಲ್ಲಿ ಸೌಂದರ್ಯ ವರ್ಧನೆಗೆ ಬಳಸುತ್ತಿದ್ದ ವಸ್ತುಗಳನ್ನೇ ಬಳಸುತ್ತಿದ್ದಾರೆ.
ಮುಖದ ಕಾಂತಿ ಹೆಚ್ಚಿಸಲು, ಚರ್ಮದ ಹೊಳಪು ಹೆಚ್ಚಿಸಲು ಬ್ಯೂಟಿಪಾರ್ಲರ್ಗಳು ಹಲವು ಸ್ಕ್ರಬ್, ಮಾಸ್ಕ್ಗಳನ್ನು ಬಳಸುತ್ತವೆ. ಆದರೆ ಇದರಲ್ಲಿ ಕೆಲವೊಂದು ಕೆಮಿಕಲ್ ಅಂಶಗಳನ್ನು ಒಳಗೊಂಡಿರುತ್ತವೆ. ಇಂಥಹಾ ಕೆಮಿಕಲ್ ಯುಕ್ತ ಸೌಂದರ್ಯ ಸಾಧನಗಳು ಚರ್ಮದ ತ್ವಚೆಗೆ ಒಳ್ಳೆಯದಲ್ಲ. ಹೀಗಾಗಿ ಕೆಮಿಕಲ್ ರಹಿತ ವಸ್ತುಗಳಿಂದ ಬಳಸಿದ ಸೌಂದರ್ಯ ಸಾಧಕಗಳನ್ನು ಬಳಸಿಕೊಳ್ಳಬಹುದು. ಅದರಲ್ಲೂ ಮುಖ್ಯವಾಗಿ ಆರ್ಯುವೇದ ವಿಷಯಾಧಾರಿತ ಸ್ಕ್ರಬ್, ಫೇಸ್ ಮಾಸ್ಕ್ ಬಳಸುವುದು ಒಳ್ಳೆಯದು.
ಉತ್ತಮ ಆಹಾರ, ಹೆಚ್ಚೆಚ್ಚು ತರಕಾರಿ, ಹಣ್ಣುಗಳನ್ನು ಸೇವಿಸುವುದರಿಂದ ಚರ್ಮ ಕಾಂತಿಯುತವಾಗಿ ಕಂಗೊಳಿಸುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇವಿಷ್ಟೇ ಅಲ್ಲದೆ ಅಡುಗೆ ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು.
ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್
ಮದುವೆ ಸಮಾರಂಭ, ಕಾರ್ಯಕ್ರಮ ಹೀಗೆ ಯಾವುದಾದರೂ ಫಂಕ್ಷನ್ಗೆ ದಿಢೀರ್ ಎಂದು ಹೋಗಬೇಕಾಗಿ ಬಂದಾಗ ಬ್ಯೂಟಿಪಾರ್ಲರ್ಗಳಿಗೆ ಹೋಗಲು ಸಮಯ ಸಾಕಾಗುವುದಿಲ್ಲ. ಈ ಸಂದರ್ಭದಲ್ಲಿ ಥಟ್ಟಂತ ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್, ಸ್ಕ್ರಬ್ ಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. ಇಂಥಹಾ ಸ್ಕ್ರಬ್ಗಳು ಸುಲಭವಾಗಿ ಮುಖಕ್ಕೆ ತಾಜಾತನ ನೀಡುತ್ತವೆ.
ಈ ಫೇಸ್ಪ್ಯಾಕ್ನ್ನು ತಯಾರಿಸಲು ನಾವು ವಸ್ತುಗಳಿಗಾಗಿ ಹುಡುಕಾಡಬೇಕಾಗಿಲ್ಲ. ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡೇ ಈ ಸೌಂದರ್ಯ ಸಾಧನಗಳನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಉದಾಹರಣೆಗೆ ಅರಿಶಿನ, ಜೇನು, ಸೌತೆಕಾಯಿ, ಟೊಮೆಟೋ ಇವೆಲ್ಲವೂ ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಹೀಗಾಗಿಯೇ ಇಂಥವುಗಳನ್ನು ಬಳಸಿಕೊಂಡೇ ಚರ್ಮದ ಆರೋಗ್ಯ ವೃದ್ಧಿಸುವ ಸೌಂದರ್ಯ ಸಾಧನಗಳನ್ನು ತಯಾರಿಸಲಾಗುತ್ತದೆ.
ಕಿಚನ್ನಲ್ಲಿರುವ ಹಲವು ವಸ್ತುಗಳನ್ನು ಸೇರಿಸಿಕೊಂಡು ಫೇಸ್ಪ್ಯಾಕ್, ಫೇಸ್ ಸ್ಕ್ರಬ್ ತಯಾರಿಸಬಹುದು. ಅದರಲ್ಲೊಂದು ಕಾಫಿ ಸ್ಕ್ರಬ್.. ಸಾಮಾನ್ಯವಾಗಿ ಟೀ, ಕಾಫಿ ಕುಡಿಯೋ ಅಭ್ಯಾಸ ಎಲ್ಲರಿಗೂ ಇರುತ್ತದೆ. ಹಾಗಾಗಿ ಮನೆಯಲ್ಲಿ ಈ ಪುಡಿಗಳು ಇದ್ದೇ ಇರುತ್ತವೆ. ಜೇನು ಸಹ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಂದಿಟ್ಟುಕೊಂಡಿರುತ್ತಾರೆ. ಬೆಣ್ಣೆಯನ್ನು ಸಹ ಅಡುಗೆಗೆ ಬಳಸಿಕೊಳ್ಳುತ್ತಾರೆ. ಇವೆಲ್ಲವನ್ನೂ ಸೇರಿಸಿಕೊಂಡೇ ಕಾಫಿ ಸ್ಕ್ರಬ್ನ್ನು ತಯಾರಿಸಬಹುದು. ಆ ಬಗ್ಗೆ ತಿಳಿಯೋಣ..
ಕಾಫಿ ಸ್ಕ್ರಬ್ ತಯಾರಿಸುವ ವಿಧಾನ
- 1 ಸ್ಪೂನ್ ಕಾಫಿ ಪುಡಿ
- ಮುಕ್ಕಾಲು ಸ್ಪೂನ್ ಜೇನು
- ಅರ್ಧ ಸ್ಪೂನ್ ತೆಂಗಿನೆಣ್ಣೆ
- ಬಟರ್ ಸಾಲ್ಟ್
ಮಾಡುವ ವಿಧಾನ
ಮೊದಲಿಗೆ ಒಂದು ಸಣ್ಣ ಗಾತ್ರದ ಬೌಲ್ನ್ನು ತೆಗೆದುಕೊಳ್ಳಿ. ಇದಕ್ಕೆ 1 ಸ್ಪೂನ್ ತೆಂಗಿನೆಣ್ಣೆ ಸೇರಿಸಿಕೊಳ್ಳಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಂಡ ನಂತರ ಮುಕ್ಕಾಲು ಸ್ಪೂನ್ ಜೇನು ಸೇರಿಸಿ. ಮತ್ತೊಮ್ಮೆ ಗಂಟುಗಳು ಬರದ ಹಾಗೇ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಂದು ಸ್ಪೂನ್ ಬಟರ್ ಸಾಲ್ಟ್ ಸೇರಿಸಿ ಮತ್ತೊಮ್ಮೆ ನೀಟಾಗಿ ಕಲಸಿಕೊಳ್ಳಿ. ಈಗ ಕಾಫಿ ಸ್ಕ್ರಬ್ ಪೇಸ್ಟ್ನಂತೆ ತಯಾರಾಗುತ್ತದೆ. ಇದನ್ನು ಮುಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಇಟ್ಟುಕೊಳ್ಳಿ.
10 ನಿಮಿಷದ ಬಳಿಕ ತಣ್ಣೀರಿನಲ್ಲಿ ಕೈಯನ್ನು ನೀಟಾಗಿ ಒದ್ದೆ ಮಾಡಿಕೊಳ್ಳಿ. ನಂತರ ಈ ಕಾಫಿ ಸ್ಕ್ರಬ್ನ್ನು ಕೈಗೆ ಹಚ್ಚಿಕೊಂಡು ಮಸಾಜ್ ಮಾಡಿ. ಕಾಲು ಗಂಟೆ ಹಾಗೇ ಒಣಗಲು ಬಿಡಿ. ನಂತರ ತಣ್ಣೀರಿನಲ್ಲಿ ಕೈಯನ್ನು ತೊಳೆಯಿರಿ. ಕೈ ಸಂಪೂರ್ಣವಾಗಿ ನಯವಾದ ಅನುಭವವಾಗುತ್ತದೆ. ತಿಂಗಳಿನಲ್ಲಿ ವಾರಕೊಮ್ಮೆ ಕೈಗೆ ಕಾಫಿ ಸ್ಕ್ರಬ್ ಹಚ್ಚಿಕೊಂಡರೆ ಕಾಂತಿಯುತ ಚರ್ಮ ನಿಮ್ಮದಾಗುತ್ತದೆ. ಕೈಯ ಚರ್ಮ ನುಣುಪಾಗುತ್ತದೆ.
ಕಾಫಿ ಸ್ಕ್ರಬ್ ಉಪಯೋಗಿಸುವುದರ ಪ್ರಯೋಜನಗಳು
ಕಾಫಿ ಸೇವನೆ ಆರೋಗ್ಯಕ್ಕೆ ಉತ್ತಮ ಎಂದೇ ಪರಿಗಣಿಸಲಾಗಿದೆ. ಅದೇ ರೀತಿ ಸೌಂದರ್ಯ ಸಾಧನಗಳ ವಿಚಾರಕ್ಕೆ ಬಂದಾಗ ಕಾಫಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಕಾಫಿಯಲ್ಲಿರುವ ಅಂಶಗಳು ಸೌಂದರ್ಯ ವೃದ್ದಿಸುವ ಕೆಲಸ ಮಾಡುತ್ತದೆ. ಕಾಫಿ ಪುಡಿಯಲ್ಲಿರುವ ಕೆಫೀನ್, ಚರ್ಮವನ್ನು ಹೆಚ್ಚು ಬಿಗಿಯಾಗಿಸುತ್ತದೆ. ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುತ್ತದೆ ಎಂದು ಹೇಳುತ್ತಾರೆ. ಕಾಫಿಯ ಫೇಸ್ ಮಾಸ್ಕ್, ಸ್ಕ್ರಬ್ ಗಳನ್ನು ತಯಾರಿಸಿ ಚರ್ಮಕ್ಕೆ ಬಳಸುವುದರಿಂದ ಚರ್ಮ ಹೆಚ್ಚು ಹೊಳಪನ್ನು ಮಾಡಿಕೊಳ್ಳುತ್ತದೆ. ಕಾಫಿ ಸ್ಕ್ರಬ್ನ ಬಳಕೆ ಚರ್ಮದಲ್ಲಿನ ಡೆಡ್ಸ್ಕಿನ್ನ್ನು ಹೋಗಲಾಡಿಸಿ ಚರ್ಮಕ್ಕೆ ತಾಜಾತನ ನೀಡುತ್ತದೆ.
ಕಾಫಿ ಪುಡಿಯಲ್ಲಿರುವ ಅಂಶ ಚರ್ಮ ಬೇಗ ಸುಕ್ಕಾಗದಂತೆ ತಡೆಯುತ್ತದೆ. ಕಾಫಿ ಪುಡಿಗೆ 1 ಚಮಚ ಹಾಲು ಸೇರಿಸಿ ಮುಖಕ್ಕೆ ಹಚ್ಚಿಕೊಂಡು 5 ನಿಮಿಷಗಳ ಕಾಲ ಮಸಾಜ್ ಮಾಡಬೇಕು. 10 ನಿಮಿಷದ ನಂತರ ತಣ್ಣೀರಿನಲ್ಲಿ ಮುಖ ತೊಳೆದುಕೊಂಡರೆ ಮೊಡವೆ, ಕಲೆ ಮೊದಲಾದ ಸಮಸ್ಯೆಗಳು ಇಲ್ಲವಾಗುತ್ತದೆ. ಕಾಫಿ ಪೌಡರ್ನ ಫೇಶಿಯಲ್ ಸಹ ಮುಖದ ಸೌಂದರ್ಯ ವೃದ್ಧಿಸಲು ಅತ್ಯುತ್ತಮ.
ಕಾಫಿ ಫೇಶಿಯಲ್
ಕಾಫಿ ಪುಡಿ ಮತ್ತು ಅಲೋವೆರಾ ಬಳಸಿ ಈ ಕಾಫಿ ಫೇಶಿಯಲ್ನ್ನು ತಯಾರಿಸಬಹುದು. 1 ಸ್ಪೂನ್ ಕಾಫಿ ಪುಡಿಗೆ 1 ಚಮಚ ಅಲೋವೆರಾ ಜೆಲ್ ಹಾಕಿಕೊಳ್ಳಬೇಕು. ಇವೆರನ್ನು ಸಣ್ಣಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು. 10 ನಿಮಿಷದ ಬಳಿಕ ತಣ್ಣೀರಲ್ಲಿ ಮುಖ ತೊಳೆದುಕೊಳ್ಳಬೇಕು. ಈ ರೀತಿ ಕಾಫಿ ಪುಡಿಯನ್ನು ಫೇಸ್ ಮಾಸ್ಕ್, ಸ್ಕ್ರಬ್ ನಲ್ಲಿ ಬಳಸುವ ಮೂಲಕ ಮನೆಯಲ್ಲೇ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಟ್ನಲ್ಲಿ ಚರ್ಮದ ಕಾಂತಿಗೆ, ನುಣುಪಿಗೆ ಯಾವ್ಯಾವುದೋ ಕೆಮಿಕಲ್ ಕ್ರೀಂ ಹಚ್ಚುವ ಬದಲು ಕಾಫಿ ಪುಡಿಯ ಬಳಕೆ ಮಾಡುವುದು ಅತ್ಯುತ್ತಮ ಎಂದೇ ಹೇಳಬಹುದು.