ಮನೆ, ಉದ್ಯೋಗ ಸ್ಥಳದಲ್ಲಿ ನಡೆಯುವ ಕೆಲವೊಂದು ಘಟನೆಗಳು ಮುಂಬರುವ ಘಟನೆಗಳನ್ನು ಸೂಚಿಸುತ್ತದೆ ಎನ್ನುವುದು ನಂಬಿಕೆ. ಕೆಲವೊಂದು ಘಟನೆಗಳು ಶುಭ, ಅಶುಭ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.
ಮನೆಯಲ್ಲಿ ಹುತ್ತ ಬೆಳೆಯುವುದರಿಂದ ಅಥವಾ ಜೇನು ಗೂಡು ಕಟ್ಟುವುದರಿಂದ ಆಗುವ ಫಲವೇನು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಮಣ್ಣಿನಿಂದಲೇ ಗೋಡೆಗಳನ್ನು ಕಟ್ಟಿ, ಮನೆಯೊಳಗೂ ಮಣ್ಣಿನ ನೆಲವನ್ನು ಹೊಂದಿದ್ದರೆ ಅಂತಹ ಜಾಗದಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಹುತ್ತಗಳು ಬೆಳೆಯುತ್ತಿದ್ದವು.
ಹುತ್ತಗಳು ಎಂದಾಕ್ಷಣ ಅದರಲ್ಲಿ ಹಾವು ಇರುತ್ತದೆ ಎನ್ನುವ ನಂಬಿಕೆ. ಹಾವು ಹುತ್ತವನ್ನು ಕಟ್ಟದಿದ್ದರೂ ಗೆದ್ದಲು ಕಟ್ಟಿದ ಹುತ್ತದೊಳಗೆ ಹಾವು ಸೇರಿಕೊಂಡಿರುವುದು ಸಾಮಾನ್ಯ. ಮನೆಯೊಳಗೆ ಗೆದ್ದಲು ಮನೆಕಟ್ಟಿದರೆ ಅದರೊಳಗೆ ಹಾವು ಸೇರಿಕೊಳ್ಳುವುದು ಅಸಾಧ್ಯ. ಆದರೆ ಶುಭ ಸೂಚನೆ. ಅದು ನಾಗದೇವರ ಸ್ಥಳ ಎಂಬ ನಂಬಿಕೆ ಕರಾವಳಿ ಭಾಗದಲ್ಲಿ. ಕರಾವಳಿಯಲ್ಲಿ ನಾಗಾರಾಧನೆ ಮಾಡುವುದರಿಂದ ಆ ನಂಬಿಕೆ ಬಂದಿರಬಹುದು. ಮನೆಯೊಳಗೆ ಹುತ್ತ ಕಟ್ಟಿದರೆ ಆ ಮನೆಯನ್ನು ಬಿಡಬೇಕು ಎಂಬ ನಂಬಿಕೆಯೂ ಇದೆ.
ಹಾಗೆಯೇ ಮನೆಯ ದಿಕ್ಕಿಗೆ ಅನುಗುಣವಾಗಿ ಜೇನು ಗೂಡು ಕಟ್ಟಿದರೆ ಶುಭ ಅಶುಭ ಎಂದು ಪರಿಗಣಿಸಲಾಗುತ್ತದೆ.
ಜೇನು ಗೂಡು ಪೂರ್ವ ದಿಕ್ಕಿನಲ್ಲಿ ಕಟ್ಟಿದರೆ ಉತ್ತಮ ಫಲ. ಆಗ್ನೇಯದಲ್ಲಿಕಟ್ಟಿದರೆ ಆಪ್ತರು ಮನೆಗೆ ಆಗಮಿಸುತ್ತಾರೆ, ಅಥವಾ ಅವರಿಂದ ಏನಾದರೂ ಅನುಕೂಲವಾಗುತ್ತದೆ. ದಕ್ಷಿಣದಲ್ಲಿ ಜೇನು ಕಟ್ಟಿದರೆ ಶುಭ ಫಲ, ನೈರುತ್ಯದಲ್ಲಿ ಕಟ್ಟಿದರೆ ದಾರಿದ್ರ್ಯ ಕಷ್ಟಗಳು ಬರುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಕಟ್ಟಿದರೆ ಶುಭ, ಬಂಧುಗಳಿಗೆ ಹಿತ, ವಾಯವ್ಯದಲ್ಲಿ ಕಟ್ಟಿದರೆ ಕೆಲಸ ಬೇಗ ಕೈಗೂಡುತ್ತದೆ. ಉತ್ತರ ದಿಕ್ಕಿನಲ್ಲಿ ದ್ರವ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ. ಈಶಾನ್ಯದಲ್ಲಿದ್ದರೂ ಶುಭ, ಮನೆಯ ಮಧ್ಯಭಾಗದಲ್ಲಿದ್ದರೆ ಸ್ತ್ರೀಯರಿಂದ ಶುಭ.