ಸೆಪ್ಟೆಂಬರ್ 18ಕ್ಕೆ ಗಣೇಶ ಚತುರ್ಥಿ. ಹಿಂದೂ ಧರ್ಮದಲ್ಲಿ ಪೂಜೆ ಮಾಡುವಾಗ ಗರಿಕೆ ಹುಲ್ಲು ಇರಲೇಬೇಕು. ಯಾವುದೇ ಪೂಜೆಗೆ ಮುನ್ನ ವಿಘ್ನ ನಿವಾರಕ ಗಣೇಶನನ್ನು ಪೂಜೆ ಮಾಡಲಾಗುವುದು. ಗಣೇಶನ ಪೂಜೆಯಲ್ಲಿ ಗರಿಕೆಗೆ ವಿಶೇಷವಾದ ಸ್ಥಾನವಿದೆ. ಗಣೇಶನ ಪೂಜೆ ಎಂದ ಮೇಲೆ ಗರಿಕೆ ಇರಲೇಬೇಕು.
ಗರಿಕೆಯ ಎಲೆಗಳು ಮೂರು ದೇವ ತತ್ವಗಳಾದ ಶಿವ, ಶಕ್ತಿ ಮತ್ತು ಗಣೇಶನನ್ನು ಪ್ರತಿಬಿಂಬಿಸುತ್ತದೆ. ಗರಿಕೆ ಹುಲ್ಲಿಗೆ ದೈವ ಸ್ವರೂಪವನ್ನು ಆಕರ್ಷಿಸುವವ ಶಕ್ತಿಯಿದೆ. ಆದ್ದರಿಂದಲೇ ಇದನ್ನು ಪೂಜೆ, ಹೋಮಗಳಲ್ಲಿ ಬಳಸಲಾಗುವುದು.
ಶಿವ ಪೂಜೆಯಲ್ಲಿ ಬಿಲ್ವೆ ಪತ್ರೆ ಎಲೆಗಳನ್ನು ಅರ್ಪಿಸಿದರೆ ಗಣೇಶನ ಪೂಜೆಯಲ್ಲಿ ಗರಿಕೆಯನ್ನು ಅರ್ಪಿಸಲಾಗುವುದು. ಗರಿಕೆ ಅರ್ಪಿಸದಿದ್ದರೆ ಗಣೇಶ ಮತ್ಯಾವ ನೈವೇದ್ಯ ಸ್ವೀಕರಿಸುವುದಿಲ್ಲ, ಗಣೇಶ ಗರಿಕೆಯನ್ನೇ ಆಹಾರವನ್ನಾಗಿ ಸೇವಿಸುತ್ತಾನೆ ಎಂಬ ನಂಬಿಕೆಯಿದೆ. ಗಣೇಶ ಚತುರ್ಥಿಯಂದು ಗಣಪನಿಗೆ ಗರಿಕೆ ಸಲ್ಲಿಸುವಾಗ ಗರಿಕೆ ಹೇಗಿರಬೇಕು? ಯಾವ ಗರಿಕೆ ಸಲ್ಲಿಸಬಾರದು ಎಂದು ಹೇಳಿದ್ದೇವೆ ನೋಡಿ
21 ಗರಿಕೆ ಅರ್ಪಿಸಿದರೆ ಅದೃಷ್ಟ ಒಲಿಯುವುದು
ಎಲ್ಲಾ ವಿಘ್ನಗಳು ಮಾಯವಾಗಿ ಜೀವನ ಸುಖಕರವಾಗಿರಲಿ ಎಂದು ವಿಘ್ನೇಶನನ್ನು ಪೂಜಿಸುತ್ತಾರೆ. ಗಣೇಶನಿಗೆ 21 ಗರಿಕೆಯನ್ನು ಅರ್ಪಿಸಿ ಪೂಜಿಸುವುದರಿಂದ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ. ಇನ್ನು ಯಾವುದೇ ಕಷ್ಟಗಳು ಇದ್ದರೂ ಅದರ ಪರಿಹಾರಕ್ಕಾಗಿ ವಿಘ್ನೇಶನ ಪೂಜೆ ಮಾಡಿದರೆ ಗಣಪ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತಾನೆ, ನಮ್ಮ ಸಂಕಲ್ಪ ನೆರವೇರಿಸುತ್ತಾನೆ ಎಂಬ ನಂಬಿಕೆ ಗಣಪನ ಭಕ್ತರಲ್ಲಿ ದೃಢವಾಗಿದೆ.
ಯಾವ ಗರಿಕೆ ಗಣೇಶನಿಗೆ ಅರ್ಪಿಸಬಾರದು?
ಗಣೇಶನಿಗೆ ಹೂ ಹೊಡೆದ ಗರಿಕೆಯನ್ನು ಅರ್ಪಿಸಬಾರದು, ಎಲೆಗಳು ಸ್ವಲ್ಪ ಒಣಗಿರುವ ಗರಿಕೆಯನ್ನು ಕೂಡ ಪೂಜೆಗೆ ಬಳಸಬಾರದು, ಇಂಥ ಗರಿಕೆಯಲ್ಲಿ ಜೀವಶಕ್ತಿಯ ಉಲ್ಲಾಸ ಕಡಿಮೆ ಇರುತ್ತದೆ, ಇದರಿಂದ ಗರಿಕೆಗೆ ದೇವತೆಗಳನ್ನು ಆಕರ್ಷಿಸುವವ ಶಕ್ತಿ ಸಾಮಾರ್ಥ್ಯ ಕೂಡ ಕಡಿಮೆ ಆಗುವುದು. ಆದ್ದರಿಂದ ಹಸಿರಾದ, ಎಳೆಯ ಗರಿಕೆಯನ್ನು ಮಾತ್ರ ಗಣಪನಿಗೆ ಅರ್ಪಿಸಬೇಕು.
ಗಣೇಶನಿಗೆ ಗರಿಕೆಯನ್ನು ಅರ್ಪಿಸುವ ಹಿಂದಿರುವ ಪೌರಾಣಿಕ ಕತೆ
ಅನಲಾಸುರ ಎಂಬ ರಾಕ್ಷಸನಿದ್ದ, ಆತ ಸ್ವರ್ಗ ಲೋಕಕ್ಕೆ ದೇವತೆಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದ. ಆ ರಾಕ್ಷಸನ ಕಣ್ಣಿನಿಂದ ಬರುವ ಬೆಂಕಿಯು ಅವನ ದಾದಿಯಲ್ಲಿ ಸಿಗುವ ಎಲ್ಲರನ್ನೂ ಸುಟ್ಟು ಭಸ್ಮ ಮಾಡುತ್ತಿದ್ದ. ಈತನ ಉಪಟಳದಿಂದ ಪಾರುಮಾಡುವಂತೆ ಗಣೇಶನ ಬಳಿ ದೇವತೆಗಳು ಕೋರುತ್ತಾರೆ.
ಗಣಪ ಆ ರಾಕ್ಷಸನ ಜೊತೆಗೆ ಹೋರಾಟ ಮಾಡುತ್ತಾ ಅನಲಾಸುರ ರಾಕ್ಷಸನನ್ನು ಸಂಪೂರ್ಣ ನುಂಗಿ ಬಿಡುತ್ತಾನೆ. ಇದರಿಂದಾಗಿ ಗಣಪನ ಹೊಟ್ಟೆ ಉಬ್ಬುವುದು, ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಗಣಪ ಕಷ್ಟಪಡುತ್ತಾನೆ. ಶಿವ, ವಿಷ್ಣು, ಚಂದ್ರ ಎಲ್ಲಾ ಬಂದು ಗಣಪನ ನೋವು ಕಡಿಮೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ, ಆಗ ಋಷಿ ಮುನಿಗಳು 21 ಗರಿಕೆಯನ್ನು ಗಣೇಶನ ತಲೆ ಮೇಲೆ ಇಡುತ್ತಾರೆ, ಗಣಪನ ದೇಹದ ಉಷ್ಣಾಂಶವೆಲ್ಲಾ ಮಾಯವಾಗುವುದು, ಅಲ್ಲಿಂದ ಗಣಪನಿಗೆ ಗರಿಕೆ ಪ್ರಿಯ ಎಂಬ ಕತೆಯಿದೆ.
ತಾಯಿ ಎದೆ ಹಾಲಿಗೆ ಸಮವಾದಗುಣ ಗರಿಕೆಯಲ್ಲಿದೆ
ತಾಯಿ ಎದೆ ಹಾಲಿನ ಬದಲಿಗೆ ಒಂದು ಚಮಚ ಗರಿಕೆ ರಸಕ್ಕೆ ಸ್ವಲ್ಪ ಜೇನು ತುಪ್ಪ ಹಾಕಿ ಪ್ರತಿನಿತ್ಯ ನೀಡಿದರೆ ಮಗು ದಷ್ಟಪುಷ್ಟವಾಗಿ ಬೆಳೆಯುತ್ತದೆ. ಆಯುರ್ವೇದಲ್ಲೂ ಗರಿಕೆಯ ಬಳಕೆ ಬಗ್ಗೆ ಉಲ್ಲೇಖವಿದೆ.
ಮೂಲವ್ಯಾಧಿ ಗುಣವಾಗುವುದು
ಅಲ್ಲದೇ ಪ್ರತಿನಿತ್ಯ ತಪ್ಪದೇ ಗರಿಕೆ ನೀರನ್ನು ಸೇವಿಸಿದರೆ ದೇಹಕ್ಕೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಗರಿಕೆ ಸೇವನೆಯಿಂದ ಮೂಲವ್ಯಾಧಿ ಸಂಪೂರ್ಣ ಗುಣವಾಗುತ್ತದೆ.