ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ? ಸಿಂಹ ರಾಶಿಯ ವರ್ಷ ಭವಿಷ್ಯ ಹೀಗಿದೆ.
ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕ್ಷಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ತಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ಮೇಷ ರಾಶಿಯವರ ವರ್ಷ ಭವಿಷ್ಯ ಹೀಗಿದೆ.
ಸಾಮಾನ್ಯವಾಗಿ ಸಿಂಹ ರಾಶಿಯಲ್ಲಿ ಜನಿಸಿದವರು ಮುಂಗೋಪಿಗಳಾಗಿರುತ್ತಾರೆ. ಆದರೆ ಕಾಲಕ್ಕೆ ಅನುಸಾರವಾದ ನಿಲುವನ್ನು ತಾಳಬೇಕು. ಸಾಧ್ಯವಾದಷ್ಟು ನಯಗಾರಿಕೆಯ ವಿಧಾನವನ್ನು ಅನುಸರಿಸಬೇಕು. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಎಂದಿಗೂ ಬದಲಿಸದ ಮನಸ್ಸಿರುತ್ತದೆ. ಸದಾಕಾಲ ಅಧಿಕಾರದಲ್ಲಿ ಉಳಿಯಲು ಬಯಸುತ್ತಾರೆ. ಉತ್ತಮ ಜ್ಞಾನವಿದ್ದರೂ ಸಹ ಅದನ್ನು ಬಳಸಿಕೊಳ್ಳುವ ರೀತಿ ನೀತಿಯ ಅನುಭವ ಇರುವುದಿಲ್ಲ. ನಿಮ್ಮ ಯೋಜನೆಗಳಿಗೆ ಸಹಾಯ ಸಹಕಾರ ನೀಡುವ ಆತ್ಮೀಯರು ಕಡಿಮೆ ಇರುತ್ತಾರೆ. ಕುಟುಂಬದಲ್ಲಿ ಕೆಲವೊಮ್ಮೆ ಶಾಂತಿ ನೆಮ್ಮದಿಯ ಕೊರತೆ ಕಂಡುಬರುತ್ತದೆ.
ಕುಟುಂಬದಲ್ಲಿನ ಹಿರಿಯರ ಮಾತಿನಂತೆ ನಡೆದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಮೊದಲ ನಾಲ್ಕು ತಿಂಗಳು ಉತ್ತಮ ಸ್ಥಾನಮಾನ ಲಭಿಸುತ್ತದೆ. ಆನಂತರ ಅದನ್ನು ಉಳಿಸಿಕೊಳ್ಳಲು ಹೆಚ್ಚಿನಪ್ರಯತ್ನ ಬೇಕಾಗುತ್ತದೆ. ಏಪ್ರಿಲ್ ತಿಂಗಳವರೆಗೂ ಮೇಲಧಿಕಾರಿಗಳ ಸಹಕಾರ ದೊರೆತರೆ ಆನಂತರ ಸಹೋದ್ಯೋಗಿಗಳ ಬೆಂಬಲ ಇರುತ್ತದೆ. ಒಟ್ಟಾರೆ ವರ್ಷಪೂರ್ತಿ ಕಾರ್ಯಕ್ಷೇತ್ರದಲ್ಲಿ ಅಧಿಪತಿಗಳಂತೆ ಮೆರೆಯುವಿರಿ. ಆದರೆ ಸಿಡುಕುತನ ಮತ್ತು ಹಠದಿಂದ ಮಾತ್ರ ತೊಂದರೆ ಎದುರಿಸಬೇಕಾಗುತ್ತದೆ.
ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ವಿರೋಧಿಗಳು ಸಹ ಸ್ನೇಹ ಬಯಸಿ ಬರುತ್ತಾರೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಪರಸ್ಪರ ಉತ್ತಮ ಹೊಂದಾಣಿಕೆ ಕಾಣದು. ಆದರೆ ನಿಮ್ಮಲ್ಲಿರುವ ಕ್ಷಮಾ ಗುಣವು ಹೊಸ ಚರಿತ್ರೆ ಸೃಷ್ಟಿಸಬಲ್ಲದು. ಸದಾಕಾಲ ತೆಗೆದುಕೊಳ್ಳುವ ತೀರ್ಮಾನಗಳಿಗೆ ಬದ್ಧರಾಗಲು ಪ್ರಯತ್ನಿಸುವಿರಿ. ಸೋಲುವ ಸಂದರ್ಭಗಳಲ್ಲಿ ಉತ್ತಮ ಯೋಜನೆಗಳಿಂದ ಕೆಲಸ ಸಾಧಿಸುವಿರಿ. ಮಾಡುವ ಪ್ರತಿ ಕೆಲಸ ಕಾರ್ಯಗಳಿಗೂ ಹಿರಿಯ ಸೋದರನ ಅಥವಾ ಹಿರಿಯ ಸೋದರಿಯ ಸಹಕಾರ ಸದಾ ಕಾಲ ಲಭಿಸಲಿದೆ. ಆದರೆ ದುಡುಕದೆ ಕಾದು ನೋಡುವ ತಂತ್ರವನ್ನು ಅನುಸರಿಸುವುದು ಒಳ್ಳೆಯದು. ಕಾನೂನಿಗೆ ಗೌರವ ನೀಡಿ ವ್ಯಾಪಾರ ವ್ಯವಹಾರಗಳನ್ನು ಮುಂದುವರಿಸಬೇಕು. ಪಾಲುಗಾರಿಕೆಯ ವ್ಯವಹಾರವಿದ್ದಲ್ಲಿ ಅನಾವಶ್ಯಕ ವಾದ ವಿವರಗಳು ಎದುರಾಗುತ್ತದೆ. ಸಾಧ್ಯವಾದಷ್ಟು ಎಲ್ಲರ ಪ್ರೀತಿ-ವಿಶ್ವಾಸವನ್ನು ಗಳಿಸಲು ಪ್ರಯತ್ನಿಸಿ.
ವಿದ್ಯಾರ್ಥಿಗಳು ಆತುರ ತೋರದೆ ಸಹಪಾಠಿಗಳ ಜೊತೆ ಕಲಿಕೆಯನ್ನು ಮುಂದುವರಿಸಬೇಕು. ಏಪ್ರಿಲ್ ತಿಂಗಳ ನಂತರ ಮನರಂಜನೆಯ ಬಗ್ಗೆ ಒಲವು ಹೆಚ್ಚುತ್ತದೆ. ಆದ್ದರಿಂದ ಪೋಷಕರ ಪ್ರಾಮುಖ್ಯತೆ ಮತ್ತು ಜವಾಬ್ದಾರಿ ಹೆಚ್ಚಿನದಾಗಿರುತ್ತದೆ. ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವ ಅಭ್ಯಾಸದ ಬಗ್ಗೆ ಹೆಚ್ಚಿನ ಒಲವು ಉಂಟಾಗುತ್ತದೆ. ಈ ಕಾರಣದಿಂದಾಗಿ ಹೆಚ್ಚಿನ ಪ್ರಯತ್ನದಿಂದ ಮಾತ್ರ ಹೆಚ್ಚಿನ ಜ್ಞಾನ ಸಂಪಾದನೆಗೆ ವಿದೇಶಕ್ಕೆ ತೆರಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸ್ವಾರ್ಥದ ಭಾವನೆ ಇರದ ಕಾರಣ ಬಡತನದಲ್ಲಿರುವ ಸಹಪಾಠಿಗಳಿಗೆ ಹಣದ ನೆರವು ನೀಡುತ್ತಾರೆ. ತಡವಾದರೂ ಸಮಾದಾನವೆನಿಸುವ ಫಲಿತಾಂಶಗಳನ್ನು ಗಳಿಸುತ್ತಾರೆ. ವೈವಾಹಿಕ ಜೀವನದಲ್ಲಿ ಮನಸ್ತಾಪವಿದ್ದರೆ ಕುಟುಂಬದ ಹಿರಿಯರ ಮಧ್ಯಸ್ಥಿಕೆಯಿಂದ ನಿವಾರಣೆಯಾಗಲಿದೆ.
ನಿಶ್ಚಯವಾದ ವಿವಾಹವು ಮುಂದೂಡಲ್ಪಡಬಹುದು. ಸಣ್ಣಪುಟ್ಟ ಕೌಟುಂಬಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಪ್ರಯತ್ನ ಪಡಬೇಕು. ಸಂಬಂಧಿಕರೊಂದಿಗೆ ವಿವಾಹ ನಿಶ್ಚಯವಾಗಿದ್ದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದಿಲ್ಲ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ಸಂಗಾತಿಯ ಸಹಾಯದಿಂದ ಕಾರ್ಯ ವಿಸ್ತಾರವೂ ಹೆಚ್ಚುತ್ತದೆ. ಹೆಚ್ಚು ಕಡಿಮೆ ಈ ವರ್ಷದಲ್ಲಿ ಪ್ರಯಾಣದಲ್ಲಿ ಸಮಯ ಕಳೆಯುವಿರಿ. ಮಾಹಿತಿ ತಂತ್ರಜ್ಞಾನದ ಬಗ್ಗೆ ವಿಶೇಷವಾಗಿ ಅಧ್ಯಯನ ನಡೆಸಲು ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಒಡಂಬಳಕೆ ಮಾಡಿಕೊಳ್ಳುವಿರಿ. ಉದ್ಯೋಗದ ನೆಪದಿಂದವಿದೇಶಕ್ಕೂ ತೆರಳುವಿರಿ. ಕುಟುಂಬದ ಹಿರಿಯರ ನಡುವಿನ ಸಂಬಂಧದಲ್ಲಿ ಉತ್ತಮ ಸುಧಾರಣೆ ಕಂಡು ಬರುತ್ತದೆ. ಆರೋಗ್ಯದ ಬಗ್ಗೆ ಗಮನ ಇರಬೇಕು ಮುಖ್ಯವಾಗಿ ನೀರಿನಿಂದ ಉಂಟಾಗುವ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಿ. ಈ ವರ್ಷದಲ್ಲಿ ಸ್ವಾರ್ಥದ ಬುದ್ಧಿ ಒಳ್ಳೆಯದು ಆದರೆ ಅದು ಅತಿ ಆಗಬಾರದು. ದಿನ ಕಳೆಯುತ್ತಾ ಕುಟುಂಬದ ಸದಸ್ಯರು ಮತ್ತು ಆತ್ಮೀಯರು ತಮ್ಮ ಮನಸ್ಸನ್ನು ಸರಿದಾರಿಗೆ ತಂದು ಜೀವನಕ್ಕೆ ಹೊಸ ಆಸೆಯನ್ನು ಮೂಡಿಸುತ್ತಾರೆ.