ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಆ ಶಿಸ್ತು ಪಾಲನೆಗೆ ಸಮಯ ಅತ್ಯಗತ್ಯ. ನಮ್ಮ ಪೂರ್ವಜರು ಸಮಯವನ್ನು ತಿಳಿಯಲು ಆಕಾಶದಲ್ಲಿನ ಸೂರ್ಯನನ್ನು ನೋಡುತ್ತಿದ್ದರು. ಈ ಆಧುನಿಕ ಯಾಂತ್ರಿಕ ಯುಗದಲ್ಲಿ ನಾವು ಗಡಿಯಾರವನ್ನು ನೋಡುವ ಮೂಲಕ ಸಮಯವನ್ನು ತಿಳಿಯುತ್ತೇವೆ.
ಗೋಡೆ ಗಡಿಯಾರಗಳಿಂದ ಸ್ಮಾರ್ಟ್ ವಾಚ್ಗಳವರೆಗೆ ಸದ್ಯ ಸಮಯವನ್ನು ಟ್ರ್ಯಾಕ್ ಮಾಡಬಹುದು. ಇಂದಿನ ಕಾಲದಲ್ಲಿ ಗಡಿಯಾರವು ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ಈ ಗಡಿಯಾರ ನಾವು ಮಾಡುವ ಕೆಲಸದಲ್ಲಿನ ತ್ವರಿತತೆಯನ್ನು, ಸಮಯ ಪ್ರಜ್ಞೆಯನ್ನು ಹಾಗೂ ಸಮತೋಲನವನ್ನು ಹೆಚ್ಚಿಸುತ್ತದೆ. ಇದಲ್ಲದೇ ವಾಚ್ ಅನ್ನು ಸರಿಯಾಗಿ ಆಯ್ಕೆ ಮಾಡುವ ಮೂಲಕವೂ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತದೆ ವಾಸ್ತುಶಾಸ್ತ್ರ. ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ಯಾವ ರೀತಿಯ ವಾಚ್ ಹಾಕಬೇಕು, ವಾಚ್ ಹೇಗಿರಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ.
ವಾಸ್ತು ಶಾಸ್ತ್ರದಲ್ಲಿ ಗಡಿಯಾರ
ವಾಸ್ತು ಶಾಸ್ತ್ರ, ಮನೆಯ ದಿಕ್ಕು, ಮೂಲೆಗಳು ಮತ್ತು ಸಾಮಗ್ರಿಗಳ ಬಗ್ಗೆ ಮಾತ್ರವಲ್ಲದೆ ವೈಯಕ್ತಿಕ ವಸ್ತುಗಳಿಗೂ ಅನ್ವಯಿಸುತ್ತದೆ. ಕೈ ಗಡಿಯಾರಕ್ಕೂ ಇದು ಅನ್ವಯಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಡಿಯಾರ ಇಡುವುದು ಜೀವನದಲ್ಲಿ ಸಮತೋಲನ ಮತ್ತು ಅದೃಷ್ಟವನ್ನು ತರುತ್ತದೆ.
ಅದರಲ್ಲೂ ಕೆಲ ನಿಯಮಗಳನ್ನು ಅನುಸರಿಸಿ ಕೈ ಗಡಿಯಾರವನ್ನು ಧರಿಸಿದರೆ ಪ್ರಗತಿಯನ್ನು ತರುತ್ತದೆ. ಜೊತೆಗೆ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಅದರ ಕೆಲವು ನಿಯಮಗಳನ್ನು ಅನುಸರಿಸದಿದ್ದರೆ ಜೀವನದಲ್ಲಿ ವೈಫಲ್ಯಗಳು ಮತ್ತು ದುರದೃಷ್ಟವನ್ನು ಎದುರಿಸಬಹುದು.
ಗಡಿಯಾರದ ಡಯಲ್
ವಾಸ್ತು ಪ್ರಕಾರ ನೀವು ಗಡಿಯಾರವನ್ನು ಧರಿಸಿದಾಗ ಅದರ ಡಯಲ್ ತುಂಬಾ ದೊಡ್ಡದಾಗಿರಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ದೊಡ್ಡ ಡಯಲ್ ಹೊಂದಿರುವ ಗಡಿಯಾರವನ್ನು ಧರಿಸುವುದು ಜೀವನದಲ್ಲಿ ಮತ್ತು ನಿಮ್ಮ ವೃತ್ತಿಜೀವನದಲ್ಲಿ ಕೆಲವು ಸಮಸ್ಯೆಗಳನ್ನು ನೀಡುತ್ತದೆ.
ಸಮಯವನ್ನು ಸರಿಯಾಗಿ ತೋರಿಸದ ಅತ್ಯಂತ ಚಿಕ್ಕ ಡಯಲ್ ಹೊಂದಿರುವ ಗಡಿಯಾರವನ್ನು ಸಹ ಧರಿಸಬಾರದು. ಗಡಿಯಾರದ ಡಯಲ್ ಅನ್ನು ಯಾವಾಗಲೂ ಸಾಮಾನ್ಯವಾಗಿ ಇರಿಸಿ. ಜೊತೆಗೆ ಗಡಿಯಾರದ ಡಯಲ್ ಚೌಕವಾಗಿರಬೇಕು ಎಂಬುದನ್ನು ಗಮನದಲ್ಲಿಡಿ.
ಗಡಿಯಾರವನ್ನು ಯಾವ ಕೈಯಲ್ಲಿ ಧರಿಸಬೇಕು?
ಯಾವ ಕೈಯಲ್ಲಿ ಗಡಿಯಾರವನ್ನು ಧರಿಸುವುದು ಉತ್ತಮ ಎಂದು ನಿರ್ದೇಶಿಸುವ ಯಾವುದೇ ನಿಯಮವಿಲ್ಲ. ಹೀಗಾಗಿ ಅನುಕೂಲಕ್ಕೆ ತಕ್ಕಂತೆ ನೀವು ಯಾವುದೇ ಕೈಯಲ್ಲಿ ಗಡಿಯಾರವನ್ನು ಹಾಕಿಕೊಳ್ಳಬಹುದು. ನೀವು ಬಲಗೈಯಲ್ಲಿ ಗಡಿಯಾರವನ್ನು ಧರಿಸಲು ಆರಾಮದಾಯಕವಾಗಿದ್ದರೆ, ಅದನ್ನು ಧರಿಸಲು ಹಿಂಜರಿಯಬೇಡಿ.
ಬೆಲ್ಟ್ ಹೇಗಿರಬೇಕು?
ಗಡಿಯಾರವನ್ನು ಧರಿಸುವಾಗ ನೀವು ಅದರ ಬೆಲ್ಟ್ ಬಗ್ಗೆಯೂ ಗಮನ ಹರಿಸಬೇಕು. ಸಡಿಲವಾದ ಪಟ್ಟಿಯ ಗಡಿಯಾರವನ್ನು ಧರಿಸಬೇಡಿ. ಏಕೆಂದರೆ ಇದು ಧರಿಸಲು ಅಹಿತಕರವಾಗಿರುತ್ತದೆ. ಈ ರೀತಿಯ ಗಡಿಯಾರವು ಒಂದೇ ಸ್ಥಳದಲ್ಲಿ ಕೇಂದ್ರೀಕರಿಸುವುದಿಲ್ಲ. ವಾಸ್ತು ಪ್ರಕಾರ ಅಂತಹ ಗಡಿಯಾರವು ನಿಮ್ಮ ವೈಫಲ್ಯಕ್ಕೆ ಕಾರಣವಾಗಬಹುದು.
ಗಡಿಯಾರದ ಬಣ್ಣ
ವಾಸ್ತು ಪ್ರಕಾರ ಚಿನ್ನ ಮತ್ತು ಬೆಳ್ಳಿಯ ಬಣ್ಣದ ಗಡಿಯಾರಗಳು ನಿಮಗೆ ಇತರ ಬಣ್ಣಗಳಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ. ಯಾವುದೇ ಕೆಲಸದ ಸಂದರ್ಶನ ಅಥವಾ ಪರೀಕ್ಷೆಗೆ ಹೋದಾಗ ಈ ರೀತಿಯ ಚಿನ್ನ ಅಥವಾ ಬೆಳ್ಳಿ ಬಣ್ಣದ ಗಡಿಯಾರವನ್ನು ಧರಿಸಿ, ಅದು ನಿಮಗೆ ಯಶಸ್ಸನ್ನು ತರುತ್ತದೆ. ಗಡಿಯಾರದ ಡಯಲ್ ತ್ರಿಕೋನವಾಗಿರಬಾರದು.
ದಿಂಬಿನ ಕೆಳಗೆ ಇಡಬೇಡಿ
ವಾಸ್ತು ಪ್ರಕಾರ ದಿಂಬಿನ ಕೆಳಗೆ ಅಥವಾ ಹತ್ತಿರ ಕೈ ಗಡಿಯಾರ ಇಡುವುದನ್ನು ತಪ್ಪಿಸಬೇಕು. ಇದು ನಿಮಗೆ ವ್ಯಾಕುಲತೆ, ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಮತ್ತು ಅದು ನಿಮಗೆ ದುರಾದೃಷ್ಟವನ್ನು ತರುತ್ತದೆ.