ಹಿಂದೂ ಧರ್ಮದಲ್ಲಿ ನಂಬಿಕೊಂಡು ಬರುತ್ತಿರುವಂತಹ ಒಂಭತ್ತೂ ಗ್ರಹಗಳು ಆಕಾಶಕಾಯಗಳು. ‘ನವ’ ಎಂದರೆ ಒಂಭತ್ತು ‘ಗ್ರಹ’ ಎಂದರೆ ಆಕಾಶಕಾಯ, ಹಾಗಾಗಿ ಇದನ್ನು ಒಟ್ಟಾಗಿ ನವಗ್ರಹಗಳೆಂದು ಕರೆಯುತ್ತೇವೆ. ನವಗ್ರಹಗಳಲ್ಲೇ ಪ್ರಬಲವಾಗಿರುವಂತಹ ಸೂರ್ಯ ದೇವನು ಉತ್ತ ಆರೋಗ್ಯ ಹಾಗೂ ಸಮೃದ್ಧಿಯನ್ನು ನೀಡುವವನು. ಚಂದ್ರನು ಮನಸ್ಸನ್ನು ನಿಯಂತ್ರಿಸುವುದರ ಜೊತೆಗೆ ಯಶಸ್ಸನ್ನು ದಯಪಾಲಿಸುವವನು.
ಮಂಗಳನು ಜೀವನದಲ್ಲಿ ಧೈರ್ಯ ಹಾಗೂ ಸಮೃದ್ಧಿಯನ್ನು ನೀಡುವವನಾದರೆ, ಬುಧನು ಬುದ್ಧಿಶಕ್ತಿ ಹಾಗೂ ಸಂಪತ್ತನ್ನು ಪ್ರತಿನಿಧಿಸುತ್ತಾನೆ. ಗುರು ವಿದ್ಯಾಕಾರಕನೂ, ಜ್ಞಾನ ಹಾಗೂ ಆರೋಗ್ಯವನ್ನು ನೀಡಿ ಹರಸುತ್ತಾನೆ. ಶುಕ್ರನು ದೀರ್ಘಾಯುಷ್ಯ ಹಾಗೂ ಲಲಿತಕಲೆಗಳಲ್ಲಿ ಪ್ರಾವೀಣ್ಯತೆ ಗಳಿಸುವಂತೆ ಮಾಡುತ್ತಾನೆ. ಶನಿಯು ಸಂತೋಷವನ್ನು, ರಾಹು ಚಂದ್ರನ ಪ್ರಭಾವವನ್ನು ಏರಿಕೆ ಮಾಡಿ, ಜೀವನವನ್ನು ಬಲಗೊಳಿಸಿದರೆ, ಕೇತು ಚಂದ್ರನಿಂದಾಗುವ ನಕಾರಾತ್ಮಕ ಪ್ರಭಾವಗಳನ್ನು ಕಡಿಮೆ ಮಾಡಿ, ಸಮೃದ್ಧಿಯನ್ನು ನೀಡುತ್ತಾನೆ.
ಪ್ರತಿಯೊಂದು ನವಗ್ರಹಗಳೂ ಒಂದೊಂದು ರೀತಿಯಲ್ಲಿ ಆಳಲ್ಪಡುತ್ತದೆ ಜೊತೆಗೆ ತಮ್ಮದೇ ಆದ ಪವಿತ್ರ ಶಕ್ತಿಯನ್ನು ಕೂಡಾ ಹೊಂದಿದೆ. ಆದ್ದರಿಂದ ಇವುಗಳು ವ್ಯಕ್ತಿಯ ಜೀವನದ ಮೇಲೂ ಆಳವಾದ ಪ್ರಭಾವವನ್ನು ಬೀರುತ್ತದೆ. ಒಬ್ಬ ವ್ಯಕ್ತಿಯ ಮೇಲೆ ಗ್ರಹಗಳು ಹೇಗೆ ಪ್ರಭಾವ ಬೀರುತ್ತವೆ ಎನ್ನುವುದು ಆ ವ್ಯಕ್ತಿಯ ಜನ್ಮಕುಂಡಲಿಯಲ್ಲಿನ ಗ್ರಹಗಳ ಸ್ಥಾನದ ಮೇಲೆ ನಿರ್ಧರಿತವಾಗುತ್ತದೆ. ನಮ್ಮ ಜೀವನದಲ್ಲಿ ನಡೆಯುವ ಸಂತೋಷ ಹಾಗೂ ದುಃಖಗಳಿಗೆ ನವಗ್ರಹಗಳು ಕಾರಣವಾಗುವುದರಿಂದ ನವಗ್ರಹಗಳನ್ನು ದೇವರಂತೆ ಪೂಜಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸರಿಸುಮಾರು ಎಲ್ಲಾ ದೇವಾಲಯಗಳಲ್ಲೂ ನವಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಗ್ರಹಗಳ ಪ್ರಾಮುಖ್ಯತೆ
ನವಗ್ರಹಗಳ ಬಗ್ಗೆ ಕಥೆಗಳು, ವಿವರಣೆಗಳು ಹಾಗೂ ಅವುಗಳು ನಮ್ಮ ಮೇಲೆ ಬೀರುವ ಪ್ರಭಾವಗಳ ಕುರಿತು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಹಾಗೂ ಪುರಾಣಗಳಾದ ಬ್ರಹ್ಮಪುರಾಣ, ಮತ್ಸ್ಯ ಪುರಾಣ, ಶಿವಪುರಾಣ, ಲಿಂಗ ಪುರಾಣ, ಕೂರ್ಮ ಪುರಾಣ, ಗರುಣ ಪುರಾಣ, ವಾಯು ಪುರಾಣ ಮತ್ತು ಭವಿಷ್ಯ ಪುರಾಣದಲ್ಲೂ ಉಲ್ಲೇಖಗಳಿವೆ.
ರಾಮ ಹುಟ್ಟಿದ ಸಮಯದಲ್ಲಿ ಮಹರ್ಷಿ ವಾಲ್ಮೀಕಿಯು ಗ್ರಹಗಳ ಸ್ಥಾನಗಳ ಬಗ್ಗೆ ವಿವರವನ್ನು ನೀಡಿದ್ದರೆ, ವ್ಯಾಸರು ಮಹಾಭಾರತದ ಯುದ್ಧದ ಆರಂಭಕ್ಕೆ ಕಾರಣವಾಗುವ ಆಕಾಶ ಹಾಗೂ ಭೂದೃಶ್ಯಗಳನ್ನು ಚಿತ್ರಿಸಿದ್ದಾರೆ. ಗ್ರಹಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಉಲ್ಲೇಖಗಳು ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಾಹಿತ್ಯ ಹಾಗೂ ಜ್ಯೋತಿಷ್ಯದಲ್ಲೂ ಕಾಣಬಹುದು.
ರಾಮಾಯಣವನ್ನು ಆಧರಿಸಿದ ಕಥೆಯೊಂದರ ಪ್ರಕಾರ ಗ್ರಹಗಳ ಸ್ಥಾನವು ರಾವಣನ ಅವಸಾನಕ್ಕೆ ಹೇಗೆ ಕಾರಣವಾಯಿತೆಂಬುದನ್ನು ತಿಳಿಸುತ್ತದೆ. ಕಥೆಯ ಪ್ರಕಾರ ನವಗ್ರಹಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡ ರಾವಣನು ತನ್ನ ಸಿಂಹಾಸನ ಮೆಟ್ಟಿಲುಗಳ ಮೇಲೆ ಮುಖವನ್ನು ಕೆಳಗೆ ಹಾಕಿ ಮಲಗುವಂತೆ ಮಾಡುತ್ತಾನೆ. ಶನಿಗೆ ಕೂಡಾ ರಾವಣನ ಹಣೆಬರಹವನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ಇದನ್ನರಿತ ನಾರದನು ರಾವಣನ ಬಳಿಗೆ ಬಂದು ‘ ನಿನಗೆ ನವಗ್ರಹಗಳನ್ನು ಎದುರಿಸಲು ಸಾಧ್ಯವಿಲ್ಲದೇ ಅವರನ್ನು ಮುಖ ಕೆಳಗಾಗಿಸಿ ಮಲಗಿಸಿದ್ದೀಯ’ ಎಂದು ಅಪಹಾಸ್ಯ ಮಾಡುತ್ತಾನೆ. ಇದರಿಂದ ಕೋಪಗೊಂಡ ರಾವಣನು ನವಗ್ರಹಗಳನ್ನು ಬೆನ್ನಮೇಲೆ ಮಲಗುವಂತೆ ಆಜ್ಞಾಪಿಸುತ್ತಾನೆ. ಇದರಿಂದಾಗಿ ಶನಿಯು ರಾವಣನಿಗೆ ತನ್ನ ಪ್ರಭಾವವನ್ನು ತೋರಿಸಲು ಹಾಗೂ ರಾವಣನ ಅವನತಿಗೆ ಕಾರಣವಾಗುವ ಘಟನೆಗಳನ್ನು ಸೃಷ್ಟಿಸಲು ಕಾರಣವಾಯಿತು. ಹೀಗೆ ರಾಮನೊಂದಿಗಿನ ಯುದ್ಧದಲ್ಲಿ ರಾವಣನು ಪರಾಜಯಗೊಂಡು ಸಾವನ್ನಪ್ಪುತ್ತಾನೆ. ಹೀಗೆ ಗ್ರಹಗಳ ಚಲನೆಯು ರಾವಣನ ಸಾವಿಗೆ ಕಾರಣವಾಯಿತು.
ನಿರ್ದಿಷ್ಟಗ್ರಹಗಳು ಋಣಾತ್ಮಕ ಪ್ರಭಾವವನ್ನು ಬೀರುವ ಸಂದರ್ಭದಲ್ಲಿ ವಾರದ ದಿನಗಳಿಗೆ ಅನುಗುಣವಾಗಿ ಆ ಗ್ರಹಗಳ ಪೂಜೆ ಸೇರಿದಂತೆ, ಪರಿಹಾರ ಕ್ರಮಗಳನ್ನು ಮಾಡಲಾಗುತ್ತದೆ. ಶನಿಯ ದಿನವಾದ ಶನಿವಾರದಂದು ಹೆಚ್ಚಿನ ಶನಿ ದೇವಾಲಯಗಳಲ್ಲಿ ಭಕ್ತರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ದೀಪಗಳನ್ನು ಹಚ್ಚುವುದನ್ನು ಕಾಣಬಹುದು.
ನವಗ್ರಹ ಪೂಜೆಯ ಮಹತ್ವ
ನವಗ್ರಹ ಪೂಜೆಯೆಂದರೆ ಒಂಭತ್ತು ಗ್ರಹಗಳಿಗೂ ಸಲ್ಲಿಸುವ ಪೂಜೆ. ಈ ಗ್ರಹಗಳ ಅಧಿಪತಿಗಳು ಪೂಜೆಯ ಪ್ರಧಾನ ದೇವತೆಗಳಾಗಿದ್ದು, ಅವರ ಆಶೀರ್ವಾದವನ್ನು ಪಡೆಯಲು ಈ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯನ್ನು ಮಾಡಬೇಕಾದರೆ ದಿನ ಗ್ರಹಗಳ ಆವರ್ತನ ವ್ಯಕ್ತಿಯ ಸ್ಥಿತಿ ಮತ್ತು ಅವರ ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ. ಈ ಪೂಜೆಯನ್ನು ಆಧ್ಯಾತ್ಮಿಕ ಮಾರ್ಗದರ್ಶಕರು ಅಥವಾ ಜ್ಯೋತಿಷಿಗಳು ಸಲಹೆ ನೀಡಿದರೆ ಮಾತ್ರ ಮಾಡಲಾಗುತ್ತದೆ. ಕೇರಳದಲ್ಲಿರುವ ತ್ರಿಪಂಗೋಡ ಶಿವ ದೇವಾಲಯದಲ್ಲಿ ಮಾಡುವ ಈ ನವಗ್ರಹ ಪೂಜೆಯು ವಿಶೇಷ ಮಹತ್ವವನ್ನು ಪಡೆದಿದೆ.
ನವಗ್ರಹ ಪೂಜೆಯ ಉಪಯೋಗ
ನವಗ್ರಹಗಳೂ ಬಹಳ ಪ್ರಭಾವಶಾಲಿ ದೈವಿಕ ಅಂಶಗಳಾಗಿರುವುದರಿಂದ ಅವುಗಳನ್ನು ಪೂಜಿಸುವುದರಿಂದ ನಮಗಾಗುವ ಆಪತ್ತುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು, ಮತ್ತು ಜೀವನದಲ್ಲಿ ಶುಭವನ್ನೂ ತರುತ್ತವೆ. ನವಗ್ರಹಗಳ ಪೂಜೆಯನ್ನು ಮಾಡಿಸುವವನಿಗೆ ಇದರಿಂದ ರಕ್ಷಣೆ ಹಾಗೂ ಆಶೀರ್ವಾದವೂ ಸಿಗುತ್ತದೆ. ಇವು ನಕಾರಾತ್ಮಕ ಅಂಶಗಳನ್ನು ನಿವಾರಿಸುತ್ತವೆ ಹಾಗೂ ಜೀವನದಲ್ಲಿ ಸಕಾರಾತ್ಮಕ ಕಂಪನಗಳನ್ನು ನೀಡುತ್ತದೆ.
ನಮ್ಮ ಹಿಂದೂ ಧರ್ಮದಲ್ಲಿ ಒಟ್ಟು ಒಂಬತ್ತು ಗ್ರಹಗಳಿವೆ, ನಮ್ಮ ಜಾತಕ ಚಕ್ರದ ಅನುಸಾರವಾಗಿ ಆ ಒಂಬತ್ತು ಗ್ರಹಗಳು ಕರ್ಮಾ, ಪುಣ್ಯ, ಪಾಪಗಳ ಫಲವನ್ನ ನಮಗೆ ನೀಡುತ್ತಾ ಇರುತ್ತದೆ, ಆ ಒಂಬತ್ತು ಗ್ರಹಗಳು ನಮ್ಮನ್ನು ಒಂದೇ ಬಾರಿ ಕಾಡುವುದಿಲ್ಲ, ನಮ್ಮ ಜಾತಕ ಚಕ್ರದಲ್ಲಿ ಯಾವ ಗ್ರಹ ಉಚ್ಚಸ್ಥಾನದಲ್ಲಿ ಇರುತ್ತದೋ ಆ ಗ್ರಹಕ್ಕೆ ಹೆಚ್ಚಿನ ಪೂಜೆ ಮಾಡಿದರೆ ಉಳಿದ ಗ್ರಹಗಳು ಕೂಡ ಅನುಕೂಲವಾಗಿರುತ್ತದೆ.
ಗ್ರಹ ದೋಷದಿಂದ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಸರಳ ವಿಧಾನವೆಂದರೆ ಅದು ನವಗ್ರಹ ಪ್ರದಕ್ಷಣೆ ಎಂದು ಶಾಸ್ತ್ರ ಹೇಳುತ್ತದೆ, ಹಾಗು ಪ್ರದಕ್ಷಣೆ ಮಾಡುವುದರಿಂದ ದೈವಿಕ ಶಕ್ತಿಯು ಮನುಷ್ಯನನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ಪದ್ದತಿಯ ಪ್ರಕಾರ ನವಗ್ರಹ ಪ್ರದಕ್ಷಣೆ ಮಾಡಿದರೆ ಬೇಗನೆ ಅದರ ಫಲಿತಾಂಶ ಕಾಣಬಹುದಾಗಿದೆ, ಇನ್ನು ಪ್ರದಕ್ಷಣೆ ಮಾಡುವಾಗ ನವಗ್ರಹ ಮೂರ್ತಿಯನ್ನ ಮುಟ್ಟಿ ಪ್ರದಕ್ಷಣೆ ಮಾಡುತ್ತೇವೆ ಆದರೆ ಅದು ತಪ್ಪು ಸಾಧ್ಯವಾದಷ್ಟು ಅವುಗಳನ್ನ ಮುಟ್ಟದೆ ಪ್ರದಕ್ಷಣೆ ಮಾಡಿ.
ನವಗ್ರಹಗಳಲ್ಲಿ ಸೂರ್ಯನು ಅಧಿಪತಿ ಯಾಗಿರುವುದರಿಂದ ಸೂರ್ಯನನ್ನು ಮಧ್ಯ ಅಥವಾ ಪೂರ್ವ ದಿಕ್ಕಿನಲ್ಲಿರುತ್ತಾನೆ, ಸೂರ್ಯನಿಗೆ ಬಲಭಾಗದಲ್ಲಿ ಅಂಗಾರಕನು ದಕ್ಷಿಣಾಭಿಮುಖವಾಗಿ ಇರುತ್ತಾನೆ, ನವಗ್ರಹ ದೇವಸ್ಥಾನಕ್ಕೆ ಒಳ ಪ್ರವೇಶ ಮಾಡುವಾಗ ಸೂರ್ಯನನ್ನ ನೋಡುತ್ತಾ ಪ್ರವೇಶ ಮಾಡಬೇಕು, ನಂತರ ಚಂದ್ರನ ಕಡೆಯಿಂದ ಬಲಭಾಗಕ್ಕೆ ಒಂಬತ್ತು ಪ್ರದಕ್ಷಣೆ ಮಾಡಬೇಕು. ಹೀಗೆ ಪ್ರದಕ್ಷಣೆ ಪೂರ್ಣಗೊಂಡ ಬಳಿಕ ಭುಧನ ಕಡೆಯಿಂದ ರಾಹು, ಕೇತುವನ್ನ ಸ್ಮರಿಸುತ್ತಾ ಎರಡು ಪ್ರದಕ್ಷಣೆ ಮಾಡಬೇಕು, ಕೊನೆಯಲ್ಲಿ ಸೂರ್ಯನನ್ನು, ಚಂದ್ರನನ್ನು ಕುಜ ಬುಧ ಭ್ರಮಸ್ಮತಿ ಶುಕ್ರ ಶನಿ ರಾಹುಕೇತುವನ್ನ ಸ್ಮರಿಸುತ್ತ ಒಂದೊಂದು ಪ್ರದಕ್ಷಿಣೆ ಮಾಡಿ ನವಗ್ರಹಗಳಿಗೆ ಬೆನ್ನು ತೋರಿಸದೆ ಬರಬೇಕು.