ನಮ್ಮಲ್ಲಿ ಸೋಮಾರಿಗಳನ್ನು ಕತ್ತೆಗಳಿಗೆ ಹೋಲಿಸುತ್ತೇವೆ. ಆದರೆ ಸ್ವತಃ ನಮಗೇ ಕತ್ತೆಗಳ ಪ್ರಯೋಜನಗಳು ಸರಿಯಾಗಿ ತಿಳಿದಿರುವುದಿಲ್ಲ. ಸ್ವಲ್ಪ ಹಿಂದಿನ ದಶಕದಲ್ಲಿ ಕೇವಲ ಬಟ್ಟೆ ಒಗೆಯುವ ಅಗಸನ ಬಳಿ ಮಾತ್ರ ಕತ್ತೆಗಳು ಕಂಡು ಬರುತ್ತಿದ್ದವು. ಆದರೆ ಈಗ ಕತ್ತೆಗಳ ಸಾಕಾಣಿಕೆ ಒಂದು ವ್ಯವಹಾರವಾಗಿ ಬದಲಾಗುತ್ತಿದೆ ಮತ್ತು ಜನರ ಜೀವನ ನಿರ್ವಹಣೆಗೆ ಸಹಾಯ ಆಗುತ್ತಿವೆ.
ಇದಕ್ಕೆ ಕಾರಣ ಎಂದರೆ ಕೇವಲ ಭಾರ ಹೊರಲು ಮಾತ್ರವಲ್ಲ, ಕತ್ತೆ ಹಾಲು ಮನುಷ್ಯನ ಆರೋಗ್ಯಕ್ಕೆ ಉಂಟು ಮಾಡುವ ಪ್ರಯೋಜನಗಳು ಇಂದು ಎಲ್ಲರ ಹುಬ್ಬೇರಿಸುತ್ತಿವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕತ್ತೆಯ ಹಾಲಿನ ಪ್ರಯೋಜನಗಳು ಒಂದೆರಡಲ್ಲ. ಹಲವು ಆಯಾಮಗಳಲ್ಲಿ ಇಂದು ಕತ್ತೆಯ ಹಾಲು ದೇಶ – ವಿದೇಶಗಳಲ್ಲಿ ಬಳಕೆ ಆಗುತ್ತಿದೆ. ಜೊತೆಗೆ ಕತ್ತೆಯ ಹಾಲಿನ ಉತ್ಪನ್ನಗಳು ಕೂಡ ಜನರ ಕಣ್ಣು ಸೆಳೆಯುತ್ತಿವೆ.
ಕತ್ತೆಯ ಹಾಲಿನಿಂದ ನಮಗೆ ಸಿಗುವ ಲಾಭಗಳು ಯಾವುವು ಮತ್ತು ಇದರ ಬಳಕೆ ಹೇಗೆ ಇಂದು ಮಾರುಕಟ್ಟೆಯಲ್ಲಿ ಇದರ ವ್ಯಾಪ್ತಿ ಎಷ್ಟಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಲಭ್ಯವಿದೆ…
ಕತ್ತೆ ಹಾಲು ಕುಡಿಯಲು ನಮ್ಮ ಆರೋಗ್ಯಕ್ಕೆ ಸುರಕ್ಷಿತವೇ ?
ಸಂಶೋಧನೆಯ ಪ್ರಕಾರ ಕತ್ತೆ ಹಾಲಿನಲ್ಲಿ ಹಸುವಿನ ಹಾಲಿಗಿಂತ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಇರುತ್ತದೆ ಎಂದು ಹೇಳುತ್ತಾರೆ.
ಆದರೆ ಒಬ್ಬ ತಾಯಿಯ ಎದೆ ಹಾಲಿನ ಪೌಷ್ಟಿಕ ಸತ್ವಗಳಿಗೆ ಸಮನಾಗಿ ಅಂದರೆ ವಿಟಮಿನ್ ಅಂಶಗಳು ಮತ್ತು ಅಗತ್ಯವಾದ ಫ್ಯಾಟಿ ಆಸಿಡ್ ಅಂಶಗಳನ್ನು ಒಳಗೊಂಡಿದೆ. ಕತ್ತೆ ಹಾಲಿನ ಆರೋಗ್ಯಕರ ಪ್ರಯೋಜನಗಳು ಸಾಕಷ್ಟಿವೆ. ಚರ್ಮ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಇದು ಬಗೆಹರಿಸುತ್ತದೆ ಮತ್ತು ಹಸುವಿನ ಹಾಲಿಗಿಂತ ದೇಹದಲ್ಲಿ ಬಹಳ ಬೇಗನೆ ಜೀರ್ಣ ಆಗುತ್ತದೆ.
ಮಕ್ಕಳಿಗೂ ಕತ್ತೆ ಹಾಲಿಗೂ ಇರುವ ನಂಟು
ಕತ್ತೆ ಹಾಲನ್ನು ಎಳೆ ಮಕ್ಕಳಿಗೆ ಕುಡಿಸುತ್ತಾರೆ. ಏಕೆಂದರೆ ಕತ್ತೆಯ ಹಾಲು ಹಸುವಿನ ಹಾಲಿಗಿಂತ ಕಡಿಮೆ ಸಾಂದ್ರತೆ ಹೊಂದಿದ್ದು, ಪುಟ್ಟ ಮಕ್ಕಳ ದೇಹದ ಜೀರ್ಣಾಂಗ ವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳುತ್ತದೆ ಮತ್ತು ಬಹಳ ಬೇಗನೆ ಜೀರ್ಣವಾಗುತ್ತದೆ.
ಎಳೆ ಕಂದಮ್ಮಗಳಲ್ಲಿ ಗ್ಯಾಸ್ಟ್ರಿಕ್ ಮತ್ತು ಅಜೀರ್ಣತೆ ಉಂಟಾಗುವುದಿಲ್ಲ ಎಂಬ ಕಾರಣಕ್ಕೆ. ಮನೆಯಲ್ಲಿನ ಎಂಟು – ಹತ್ತು ವರ್ಷದ ಮಕ್ಕಳಿಗೂ ಕೂಡ ಕತ್ತೆ ಹಾಲಿನ ಸೇವನೆ ಮಾಡಿಸುತ್ತಾರೆ. ವರ್ಷಕ್ಕೆ ಒಂದು ಬಾರಿಯಾದರೂ ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸುವುದರಿಂದ ಅವರ ದೇಹದ ರೋಗ – ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಕೆಮ್ಮು, ಹೊಟ್ಟೆಯಲ್ಲಿನ ಸೋಂಕು ಮತ್ತು ಚರ್ಮದ ಸೋಂಕು ಇಲ್ಲವಾಗುತ್ತದೆ ಎಂದು ಹೇಳುತ್ತಾರೆ.
ಕತ್ತೆಯ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲು ಇದಕ್ಕಿಂತ ಬೇರೆ ಕಾರಣ ಬೇಕಿಲ್ಲ. ಆದರೆ ಕತ್ತೆ ಹಾಲು ತುಂಬಾ ದುಬಾರಿ ಎಂದು ಹೇಳಬಹುದು.
ಸುಂದರಿ ಕ್ಲಿಯೋಪಾತ್ರಳಿಗೂ ಇತ್ತಂತೆ ಕತ್ತೆಯ ಮೇಲೆ ವ್ಯಾಮೋಹ !!
ಕತ್ತೆ ಹಾಲಿನಲ್ಲಿ ಆಂಟಿ – ಆಕ್ಸಿಡೆಂಟ್ ಅಂಶಗಳು ಹೇರಳವಾಗಿದ್ದು, ಇವುಗಳು ನಮ್ಮ ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಯುವ ಶಕ್ತಿ ಪಡೆದಿವೆ ಎಂದು ಹೇಳುತ್ತಾರೆ.
ಹಿಂದಿನ ರಾಜ – ಮಹಾರಾಜರ ಕಾಲದಲ್ಲಿ ಭೂಲೋಕ ಸುಂದರಿ ಕ್ಲಿಯೋಪಾತ್ರ ಬಕೆಟ್ ಗಟ್ಟಲೇ ಕತ್ತೆಗಳ ಹಾಲಿನಿಂದ ಸ್ನಾನ ಮಾಡುತ್ತಿದ್ದಳು. ಆದ್ದರಿಂದಲೇ ಅವಳು ಇನ್ನೊಬ್ಬ ಮಹಿಳೆ ಅಸೂಯೆ ಪಡುವಂತಹ ಸುಂದರಿಯಾಗಿದ್ದಳು ಎಂಬ ಬಗ್ಗೆ ಪುಸ್ತಕಗಳಲ್ಲಿ ಉಲ್ಲೇಖವಿದೆ ಹೇಳುತ್ತಾರೆ.
ಕತ್ತೆಯ ಹಾಲಿನಲ್ಲಿ ಹಸುವಿನ ಹಾಲಿನಂತೆ ವಿಟಮಿನ್ ‘ ಸಿ ‘, ವಿಟಮಿನ್ ‘ ಎ’, ವಿಟಮಿನ್ ‘ ಬಿ1 ‘, ವಿಟಮಿನ್ ‘ ಬಿ2 ‘, ವಿಟಮಿನ್ ‘ ಬಿ6 ‘, ವಿಟಮಿನ್ ‘ ಡಿ ‘ ಮತ್ತು ವಿಟಮಿನ್ ‘ ಇ ‘ ಅಂಶಗಳು ಹೇರಳವಾಗಿದ್ದು, ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಕಂಡು ಬರುವ ಚರ್ಮದ ಮೇಲಿನ ಇಸುಬು ಮತ್ತು ಇತರ ಚರ್ಮದ ವ್ಯಾಧಿಗಳು, ಅಲರ್ಜಿ ಸಮಸ್ಯೆಗಳು ಬಗೆಹರಿಯುತ್ತವೆ.
ಕತ್ತೆ ಹಾಲಿನಿಂದ ಕಾಸ್ಮೆಟಿಕ್ ಉತ್ಪನ್ನ : –
ಈಗಿನ ಆಧುನಿಕ ಯುಗದಲ್ಲಿ ಯಾವುದೇ ಒಂದು ವಸ್ತುವಿನಿಂದ ಯಾವೆಲ್ಲಾ ಪ್ರಯೋಜನಗಳು ಲಭ್ಯವಾಗುತ್ತವೆ ಎಂಬುದನ್ನು ಸಂಶೋಧಕರು ತಲೆ ಕೆಡಿಸಿಕೊಂಡು ಹುಡುಕುತ್ತಿರುತ್ತಾರೆ. ಹಾಗಾಗಿ ಕತ್ತೆಯ ಹಾಲಿನಲ್ಲಿ ಹಾಲಿನ ಪುಡಿ, ಕಾಸ್ಮೆಟಿಕ್ ಉತ್ಪನ್ನಗಳು, ಸನ್ ಸ್ಕ್ರೀನ್, ಸ್ಕಿನ್ ಬ್ಯೂಟಿ ಕ್ರೀಮ್, ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಸ್ಕಿನ್ ಲೋಷನ್ ತಯಾರು ಮಾಡುತ್ತಾರೆ.
ಸೌಂದರ್ಯವರ್ಧನೆಯ ಜೊತೆಗೆ ಇತರ ಪ್ರಯೋಜನಗಳು
ಸೌಂದರ್ಯ ವರ್ಧನೆಗೆ ಸಂಬಂಧ ಪಟ್ಟಂತೆ ಈ ಮೇಲಿನ ಆರೋಗ್ಯ ಪ್ರಯೋಜನಗಳು ಕತ್ತೆಯ ಹಾಲಿನಲ್ಲಿ ಸಿಗುವುದರ ಜೊತೆಗೆ ಇದರಲ್ಲಿ ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳು ಇರುವುದರಿಂದ ಹೃದಯದ ಆರೋಗ್ಯವನ್ನು ಹೆಚ್ಚು ಮಾಡುವಂತಹ ಲಕ್ಷಣಗಳು ಕತ್ತೆಯ ಹಾಲಿನಲ್ಲಿವೆ.
ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಮತ್ತು ಅವಶ್ಯವಿಲ್ಲದ ಫ್ಯಾಟಿ ಆಸಿಡ್ ಅಂಶಗಳನ್ನು ಕಡಿಮೆ ಮಾಡಿ ನಮ್ಮ ಸಂಪೂರ್ಣ ಆರೋಗ್ಯವನ್ನು ವೃದ್ಧಿಸುತ್ತದೆ.