ಮಕ್ಕಳಿಗೆ ಹೆಸರು ಇಡುವ ಮೊದಲು ಈ ಮಾಹಿತಿ ನೋಡಿ!

ಮಕ್ಕಳಿಗೆ ಹೆಸರಿಡುವುದು ಸುಲಭದ ಕೆಲಸವಲ್ಲ. ಮಗುವಿಗೆ ಹೆಸರು ಆಯ್ಕೆ ಮಾಡುವಾಗ ಸಾಕಷ್ಟು ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುವುದು. ಆ ಸಂದರ್ಭದಲ್ಲಿ ಪೋಷಕರು ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕಾದ 7 ವಿಷಯಗಳು ಇಲ್ಲಿವೆ..

ಮಗುವಿಗೆ ಹೆಸರಿಡುವುದೆಂದರೆ ಹೆತ್ತವರಿಗೆ ಅದೊಂದು ದೊಡ್ಡ ಟಾಸ್ಕ್. ಒಬ್ಬರಿಗೆ ಇಷ್ಟವಾದ ಹೆಸರು ಮತ್ತೊಬ್ಬರಿಗೆ ಇಷ್ಟವಾಗೋಲ್ಲ. ಯಾವುದೋ ಒಂದು ವಿಧಾನದಲ್ಲಿ ಯೋಚಿಸಿ ಹೆಸರು ಹುಡುಕಿದರೆ ಅದು ಮತ್ತೊಂದು ರೀತಿಯಲ್ಲಿ ಸರಿ ಬರುತ್ತಿರುವುದಿಲ್ಲ. ಹೆಸರು ಸಾಮಾನ್ಯಕ್ಕಿಂತ ಹೆಚ್ಚು ವಿಶಿಷ್ಟವಾಗಿದ್ದರೂ ಆಡ್ ಎನಿಸುತ್ತದೆ. ತೀರಾ ಸಾಮಾನ್ಯವಾಗಿದ್ದರೂ ಚೆನ್ನಾಗೆನಿಸುವುದಿಲ್ಲ. 

ಆದರೆ, ಹೆಸರಿಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಮುಂದೆ ಅದ ಮಗುವಿನ ವ್ಯಕ್ತಿತ್ವದ ಭಾಗವೇ ಆಗಿರಲಿದೆ. ಹೀಗಾಗಿ, ಪೋಷಕರಿಟ್ಟ ಹೆಸರು ಮುಂದೆ ಮಗುವಿಗೆ ಮುಜುಗರ ತರಬಾರದು. ಹಾಗಾಗಿ ಮಗುವಿಗೆ ಹೆಸರಿಡುವ ಮುನ್ನ ಈ ಏಳು ವಿಷಯಗಳನ್ನು ಇಲ್ಲವೇ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಂಡು ಮುಂದುವರಿಯಿರಿ 

ಹೆಸರು surname‌ಗೆ ಹೊಂದಿಕೆಯಾಗುತ್ತಾ?

ಕೆಲವೊಮ್ಮೆ ಹೆಸರೇನೋ ಚೆನ್ನಾಗಿರುತ್ತದೆ. ಆದರೆ, ಸರ್‌ನೇಮ್ ಜೊತೆ ಸರಿಯಾಗಿ ಸೇರುತ್ತಿರುವುದಿಲ್ಲ. ಎರಡನ್ನೂ ಜೋಡಿಸಿ ಹೇಳಿದಾಗ ವಿಚಿತ್ರವಾಗಿ ಕೇಳಿಸುತ್ತದೆ. ಹಾಗಾಗಿ, ಹೆಸರು  ಉಪನಾಮದೊಂದಿಗೆ ಹೊಂದುತ್ತದೆಯೇ ಎಂದು ಪರಿಶೀಲಿಸುವುದು ಅತ್ಯಗತ್ಯ. ಇಲ್ಲದಿದ್ದರೆ, ನಿಮ್ಮ ಮಗು ಮುಂದೆ ಬಹಳಷ್ಟು ಮುಜುಗರ ಎದುರಿಸಬೇಕಾಗುತ್ತದೆ. 

ಬೆಳೆದಾಗಲೂ ಹೆಸರು ಮಗುವಿಗೆ ಸರಿ ಹೊಂದುತ್ತದೆಯೇ?

ನೀವು ಮಗು ಎಂದು ಕುಮಾರ, ಬೇಬಿ, ಪುಟ್ಟ ಎಂದೆಲ್ಲ ಹೆಸರಿಟ್ಟರೆ ಅವರು ಬೆಳೆದ ಮೇಲೆ ಆ ಹೆಸರುಗಳು ಅಪಹಾಸ್ಯಕ್ಕೆ ಒಳಗಾಗುವುದರಲ್ಲಿ ಅನುಮಾನವಿಲ್ಲ. ಅಥವಾ ಸಣ್ಣ ಮಗುವಿಗೆ ಪರಮವೀರ ಪಂಚಾಕ್ಷರಿ ಎಂದೆಲ್ಲ ಉದ್ದುದ್ದನೆಯ, ದೊಡ್ಢವರದೆನಿಸುವ ಹೆಸರಿಟ್ಟರೂ ಚೆನ್ನಾಗಿರುವುದಿಲ್ಲ. ಯಾವುದೇ ಹೆಸರಿಡುವಾಗ ಅದು ಜೀವನದ ಎಲ್ಲ ಹಂತಗಳಲ್ಲೂ ಹೊಂದುವಂತಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. 

ನಿಕ್‌ನೇಮ್ ಸರಿಯಾಗುತ್ತದೆಯೇ?

ಏನೇ ಹೆಸರಿಟ್ಟರೂ ನಿಕ್ ನೇಮ್ ಹುಟ್ಟಿಕೊಳ್ಳುತ್ತದೆ. ಹೆಸರನ್ನು ಮೊಟಕುಗೊಳಿಸಬಾರದೆಂದು ಸಣ್ಣ ಹೆಸರಿಡುವ ಯೋಚನೆಯಲ್ಲಿ ಇನಿ ಎಂದಿಟ್ಟರೂ ಕಡೆಗಾಕೆಯನ್ನು ಸ್ನೇಹಿತರು ಇ ಎಂದು ಕೂಡಾ ಕರೆಯಬಲ್ಲರು! ಕೆಲವೊಮ್ಮೆ ಚೆಂದವಿದೆ ಎಂದು ಯಾವುದೋ ಹೆಸರು ಆಯ್ಕೆ ಮಾಡಿರುತ್ತೀರಿ. ಆದರೆ, ಅದನ್ನು ನಿಕ್‌ನೇಮಲ್ಲಿ ಕರೆವಾಗ ತುಂಬಾ ಕೆಟ್ಟ ಅರ್ಥ ಧ್ವನಿಸುತ್ತದೆ ಅಥವಾ ತಮಾಷೆಯ ಪದ ಕೇಳುತ್ತದೆ. ಇದರಿಂದ ಮಗುವಿನ ಹೆಸರು ಸದಾ ಕಾಲ ಹಾಸ್ಯದ ವಸ್ತುವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಹೆಸರನ್ನು ಮೊಟಕುಗೊಳಿಸಿದರೂ ಚೆನ್ನಾಗಿ ಧ್ವನಿಸುವ ಹೆಸರು ಆಯ್ಕೆ ಮಾಡಿ.

ಹೆಸರು ತುಂಬಾ ಸಾಮಾನ್ಯವಾಗಿದೆಯೇ?

ತರಗತಿಯೊಂದರಲ್ಲಿ ನಿಮ್ಮ ಮಗುವಿನ ಹೆಸರೇ ಇನ್ನೂ ನಾಲ್ಕು ಮಕ್ಕಳಿಗಿದ್ದರೆ ಏನು ಚೆನ್ನ? ಹಾಗಾಗಿ, ಹೆಸರಿಡುವಾಗ ತೀರಾ ಸಾಮಾನ್ಯವಾದ, ನಿಮ್ಮ ಸುತ್ತಲೂ ಕೇಳಿ ಬರುವ ಹೆಸರನ್ನೇ ಇಡಬೇಡಿ. ಟ್ರೆಂಡ್‌ನಲ್ಲಿ ಹೆಚ್ಚಾಗಿದೆ ಎಂದು ಯಾವುದೋ ಹೆಸರು ಆಯ್ಕೆ ಮಾಡಿದರೆ ಆ ಹೆಸರಿನವರು ಮಗು ಹೋದಲ್ಲೆಲ್ಲ ಸಾಕಷ್ಟು ಜನ ಸಿಗುತ್ತಾರೆ. 

ನೆಚ್ಚಿನ ಸೆಲೆಬ್ರಿಟಿಯ ಹೆಸರನ್ನು ಮಗುವಿಗೆ ಇಡುತ್ತೀರಾ?

ನಿಮ್ಮ ಮಗುವಿಗೆ ನಿಮ್ಮ ಮೆಚ್ಚಿನ ಸೆಲೆಬ್ರಿಟಿಗಳ ಹೆಸರನ್ನು ಇಡುವ ಬಗ್ಗೆ ನೀವು ಉತ್ಸುಕರಾಗುವ ಮೊದಲು ಈ ಕೆಲ ವಿಷಯಗಳನ್ನ ಯೋಚಿಸಬೇಕು. ಸೆಲೆಬ್ರಿಟಿ ಎಂದ ಮೇಲೆ ಸಾಕಷ್ಟು ಮಕ್ಕಳಿಗೂ ಅದೇ ಹೆಸರಿಡಲಾಗಿರುತ್ತದೆ. ಆ ಸೆಲೆಬ್ರಿಟಿ ಏನೋ ವಿವಾದದಲ್ಲಿ ಸಿಲುಕಿಕೊಂಡಾಗ ಮಗುವಿನ ಸಹಪಾಠಿಗಳು ಮಗುವನ್ನು ತಮಾಷೆಯ ವಸ್ತುವಾಗಿಸಬಹುದು. ದೊಡ್ಡವರಾದ ಮೇಲೆ ಇತರರು ಆ ಸೆಲೆಬ್ರಿಟಿಯ ಸಾಧನೆಯೊಂದಿಗೆ ಮಗುವಿನ ಸಾಧನೆ ಹೋಲಿಕೆ ಮಾಡಿ ಮಾತಾಡಬಹುದು. 

ಉಚ್ಚರಿಸುವುದು ಸುಲಭವೇ?

ಮಗುವಿನ ಹೆಸರು ವಿಶಿಷ್ಠವಾಗಿರಬೇಕೆಂದು ನಾಲಿಗೆ ತಿರುಗಲೇ ಕಷ್ಟಪಡುವಂಥ ಹೆಸರಿಟ್ಟರೆ ಕಡೆಗೆ ಆ ವಿಶಿಷ್ಠ ಹೆಸರನ್ನು ಯಾರೂ ಕರೆಯುವುದೇ ಇಲ್ಲ. ಯಾವುದೋ ನಿಕ್‌ನೇಮ್ ಕಡೆವರೆಗೂ ಬಳಕೆಯಾಗುತ್ತದೆಯಷ್ಟೇ. ಅಲ್ಲದೆ, ಮಗು ಸುಮಾರು ದೊಡ್ಡವಾಗುವವರೆಗೂ ತನ್ನ ಹೆಸರನ್ನು ತಪ್ಪುತಪ್ಪಾಗಿ ಹೇಳಿ, ಆ ತಪ್ಪು ಹೆಸರೇ ಎಲ್ಲರ ಬಾಯಲ್ಲಿ ಓಡಾಡುವಂತಾಗಬಹುದು. ಉಚ್ಚರಿಸಲು ಸುಲಭವಾಗಿರುವ ಹೆಸರನ್ನು ಆಯ್ಕೆ ಮಾಡಿ. 

ಹೆಸರು ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆಯೇ?

ಕೊನೆಯದಾಗಿ ನಿಮ್ಮ ಮಗುವಿನ ದೃಷ್ಟಿಕೋನದಿಂದ ಯೋಚಿಸಿ. ತನ್ನ ಹೆಸರನ್ನು ಹೇಳುವಾಗ ಮಗುವಿಗೆ ಹೆಮ್ಮೆ ಇರಬೇಕು. ಆತ್ಮವಿಶ್ವಾಸ ಇರಬೇಕು. ಬದಲಿಗೆ ಅಳುಕು ಮೂಡಿಸಬಾರದು.  

Related Post

Leave a Comment