ತಿರುಪತಿ ತಿಮ್ಮಪ್ಪನ ನಾಮಸ್ಮರಣೆಯೇ ಚಂದ. ತಿಮ್ಮಪ್ಪನ ಗುಣಗಾನವೇ ಬಹಳ ಚಂದ ಹಾಗೂ ಬಹಳ ಆನಂದ. ಲಕ್ಷ್ಮಿಪತಿ ಒಲಿದರೆ ಬದುಕೇ ಬಂಗಾರ ಮತ್ತು ಮನುಷ್ಯ ಜನ್ಮವೇ ಪರಮ ಪಾವನ. ತಿಮ್ಮಪ್ಪನ ಬಳಿ ಶ್ರದ್ಧೆಯಿಂದ ಬೇಡಿಕೊಂಡರೆ ನಿಮ್ಮ ಎಲ್ಲಾ ಕೆಲಸಕಾರ್ಯಗಳಲ್ಲಿ ಜಯ ದೊರಕುತ್ತದೆ. ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆಯಲು ನಾನಾ ಕಡೆಯಿಂದ ಪ್ರತಿನಿತ್ಯ ಲಕ್ಷಕ್ಕೂ ಅಧಿಕ ಮಂದಿ ಆಗಮಿಸುತ್ತಾರೆ. ತಿರುಪತಿ ತಿಮ್ಮಪ್ಪನಿಗೆ ಮುಡಿಪು ಕಟ್ಟುವುದು ಹಿಂದಿನ ಪರಂಪರೆಯಿಂದ ನಡೆದುಕೊಂಡು ಬಂದಿದೆ. ತಿರುಪತಿ ತಿಮ್ಮಪ್ಪನಿಗೆ ಮುಡಿಪು ಕಟ್ಟುವುದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ.
ತಿರುಪತಿ ತಿಮ್ಮಪ್ಪನ ದಶಾವತಾರಿ ಭಗವಂತ ಶ್ರೀವಿಷ್ಣು. ದೇವರ ದೇವನ ಲೀಲೆಗಳು ಬಹಳಷ್ಟಿವೆ. ಭಗವಂತನನ್ನು ನಂಬಿ ಶ್ರದ್ಧೆಯಿಂದ ಮುಡಿಪು ಕಟ್ಟಿದರೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು ಖಚಿತ. ಈ ಹಿಂದೆ ಕಷ್ಟಗಳು ಎದುರಾದಾಗ, ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದಾಗ, ವಿದ್ಯಾಭ್ಯಾಸದಲ್ಲಿ ಮಕ್ಕಳು ಹಿಂದೆ ಉಳಿದಿದ್ದರೆ ದೇವರಿಗೆ ಭಕ್ತಿಯಿಂದ ಮುಡಿಪನ್ನು ಕಟ್ಟುತ್ತಿದ್ದರು, ಆದರೆ ಈಗಿನ ಕಾಲದ ಜನರಿಗೆ ಇದರ ಬಗ್ಗೆ ಅರಿವಿಲ್ಲ. ನಂಬಿಕೆಯೇ ಜೀವನ ಹಾಗೂ ನಂಬಿಕೆಯಿಂದ ತಿಮ್ಮಪ್ಪನನ್ನು ನೆನಪಿಸಿಕೊಂಡು ಮುಡುಪು ಕಟ್ಟಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ಕೆಲವರು ತಮ್ಮ ಇಷ್ಟದೇವರು ಅಥವಾ ಕುಲದೇವರಿಗೆ ಮುಡಿಪನ್ನು ಕಟ್ಟುತ್ತಾರೆ ಹಾಗೂ ಅವರು ಅಂದುಕೊಂಡ ದಿನ ಅಲ್ಲಿಗೆ ತೆರಳಿ ಮುಡಿಪನ್ನು ಸಮರ್ಪಿಸುತ್ತಾರೆ.
ಯಾರು ತಿಮ್ಮಪ್ಪನಿಗೆ ಮುಡಿಪನ್ನು ಕಟ್ಟಬೇಕು ಎಂದು ಅಂದುಕೊಳ್ಳುತ್ತಾರೋ ಅವರು ಮೊದಲಿಗೆ ಶುದ್ಧ ಮನಸ್ಸಿನಿಂದ ಶುದ್ಧವಾದ ಬಿಳಿ ಬಟ್ಟೆಯನ್ನು ತೆಗೆದುಕೊಂಡು ನಂತರ ಅರಿಶಿಣವನ್ನು ಲೇಪಿಸಬೇಕು. ಅರಿಶಿಣವನ್ನು ಲೇಪಿಸಿದ ನಂತರ 11 ರೂಪಾಯಿ ಹಣವನ್ನು ಇಟ್ಟು ಭದ್ರವಾಗಿ ಕಟ್ಟಬೇಕು. ತದನಂತರ ದೇವರಕೋಣೆಯಲ್ಲಿ ದೇವರಮುಂದೆ ಇಟ್ಟು ಪ್ರತಿನಿತ್ಯ ಪೂಜೆಯನ್ನು ಮಾಡಬೇಕು ಹಾಗೂ ಈ ಮುಡಿಪಿಗೆ ಪ್ರತಿನಿತ್ಯವೂ ದೀಪಾರಾಧನೆಯನ್ನು ಮಾಡಬೇಕು. ಪ್ರತಿನಿತ್ಯ ದೀಪಾರಾಧನೆಯನ್ನು ಮಾಡಿದ ಮೇಲೆ ಭಗವಂತನಲ್ಲಿ ಅಂದುಕೊಂಡ ಕೆಲಸ ಯಶಸ್ವಿಯಾದ ಮೇಲೆ ಮುಡಿಪನ್ನು ಅರ್ಪಿಸುತ್ತೇನೆ ಎಂದು ಹೇಳಬೇಕು. ಈ ರೀತಿಯಾಗಿ ಮಾಡಿದರೆ ಎಲ್ಲವೂ ಸುಖಮಯವಾಗಿ ಸಾಗುತ್ತದೆ.