ಶಿವನ ಸ್ವರೂಪ ವಿಶೇಷ. ಹುಲಿಯ ಚರ್ಮ ಹೊದ್ದವನು, ಹಾವನ್ನು ಧರಿಸುವವನು, ಜಟೆಯಲ್ಲಿ ಗಂಗೆಯನ್ನೇ ಧರಿಸಿದವನು. ಇಷ್ಟು ಸಾಲದೆಂಬಂತೆ ಮೂರು ಕಣ್ಣುಗಳು ಆತನನ್ನು ಮತ್ತಷ್ಟು ನಿಗೂಢವಾಗಿಸಿವೆ. ಅವನಿಗೇಕೆ ಮೂರು ಕಣ್ಣುಗಳು ಎಂದು ಯೋಚಿಸಿದ್ದೀರಾ?
ನಮಗೆ ಮುಕ್ಕೋಟಿ ದೇವರಿದ್ದರೂ ಅದರಲ್ಲಿ ಶಿವನ ಸ್ಥಾನ ಹಿರಿದಾದುದು. ಆತ ಸಮಯ, ಜಗತ್ತು, ಭೂಮಿ ಮೇಲಿನ ಜೀವಿಗಳನ್ನು ನಿಯಂತ್ರಿಸುವಾತ. ಈ ಶಿವನ ಸ್ವರೂಪವೇ ವಿಶೇಷ. ಮಹಾದೇವನಾದರೂ ಕಡು ವೈರಾಗಿಯಂತ ವೇಷಭೂಷಣ ಆತನದು. ಸ್ಮಶಾನ ವೈರಾಗಿಯಂತೆ ಮೈ ತುಂಬಾ ಭಸ್ಮ ಬಳಿದುಕೊಂಡು, ಹುಲಿಯ ತೊಗಲನ್ನು ಬಟ್ಟೆಯಾಗಿ ಧರಿಸಿದವನು. ಜೆಟೆಯನ್ನು ಮೇಲೆ ತುರುಬಾಗಿಸಿ, ಅದರ ಮೇಲೆ ಗಂಗೆಯನ್ನು ಹೊತ್ತವನು. ತಲೆಯ ಮೇಲೆ ಚಂದ್ರನನ್ನು ಇಟ್ಟುಕೊಂಡಿದ್ದು, ಇಷ್ಟು ವಿಶೇಷಗಳು ಸಾಲದೆಂಬಂತೆ ಕತ್ತಿಗೆ ಹಾವನ್ನೇ ಸುತ್ತಿಕೊಂಡವನು. ಇವೆಲ್ಲವೂ ವಿಶೇಷ ಅಲಂಕಾರವೇ. ಆದರೆ, ಅಲಂಕಾರವಲ್ಲದೆ, ಆತನ ದೈಹಿಕ ರೂಪದಲ್ಲಿ ಬೆರಗು ಮೂಡಿಸುವುದು ಆತನ ಮೂರನೆಯ ಕಣ್ಣು. ಈ ಕಣ್ಣಿನ ಕಾರಣದಿಂದ ಮುಕ್ಕಣ್ಣ, ತ್ರಿನೇತ್ರ ಎಂದೆಲ್ಲ ಕರೆಸಿಕೊಳ್ಳುವ ಶಿವನ ಈ ಕಣ್ಣಿಗೆ ವಿಶೇಷ ಅರ್ಥವಿದೆ.
ಸಾಮಾನ್ಯವಾಗಿ ಆಡುಮಾತಿನಲ್ಲಿ ಶಿವ ತನ್ನ ಮೂರನೇ ಕಣ್ಣನ್ನು ತೆರೆದರೆ ಪ್ರಳಯವಾಗುತ್ತದೆ ಎನ್ನುತ್ತೇವೆ. ಆದರೆ, ಅದೇಕೆ ಶಿವನಿಗಿದೆ, ನಿಜವಾಗಿಯೂ ಪ್ರಳಯವಾಗುತ್ತಾ, ಎಂದಾದರೂ ಆತ ಮೂರನೇ ಕಣ್ಣನ್ನು ತೆರೆದಿದ್ದಾನಾ ಮುಂತಾದ ವಿಷಯ ಬಹುತೇಕರಿಗೆ ತಿಳಿದಿಲ್ಲ.
ಮೂರನೇ ಕಣ್ಣು ಹೀಗೆ ಹುಟ್ಟಿತು
ಒಮ್ಮೆ ಶಿವ ಧ್ಯಾನ ಮಾಡುತ್ತಿದ್ದಾಗ ತಮಾಷೆಗಾಗಿ ಪಾರ್ವತಿಯು ಆತನ ಕಣ್ಣುಗಳನ್ನು ಕೈಯಿಂದ ಮುಚ್ಚುತ್ತಾಳೆ. ಕೂಡಲೇ ಇಡೀ ಜಗತ್ತು ಕತ್ತಲಲ್ಲಿ ತುಂಬಿ ಹೋಗುತ್ತದೆ. ಎಲ್ಲ ಕಡೆ ಕೋಲಾಹಲ ಉಂಟಾಗುತ್ತದೆ. ಆಗ ಶಿವನು ತನ್ನ ಅಂತಃಶಕ್ತಿಯನ್ನು ಬಳಸಿ ಮೂರನೇ ಕಣ್ಣನ್ನು ಸೃಷ್ಟಿಸುತ್ತಾನೆ. ಈ ಕಣ್ಣಿನಿಂದ ಬೆಂಕಿ ಹೊರಹೊಮ್ಮಿ ಜಗತ್ತಿಗೆ ಬೆಳಕು ಬರುತ್ತದೆ.
ಮೂರನೇ ಕಣ್ಣು ತೆರೆದಾಗ
ಶಿವನನ್ನು ಪ್ರಜಾಪತಿ ಅವಮಾನಿಸಿದಾಗ ಆತನ ಪುತ್ರಿ, ಶಿವನ ಮೊದಲ ಪತ್ನಿ ಸತಿ ಸ್ವಯಂ ಅಗ್ನಿಗೆ ಆಹುತಿಯಾಗುತ್ತಾಳೆ. ಆಗ ಶಿವ ಕೋಪದಿಂದ ತನ್ನ ಮೂರನೇ ಕಣ್ಣನ್ನು ತೆರೆಯುತ್ತಾನೆ. ಆತ ಹಾಗೆ ಕಣ್ಣು ತೆರೆದಾಗ ಯಜ್ಞದಲ್ಲಿ ಭಾಗವಹಿಸಿದ್ದ ಎಲ್ಲರೂ ಕೂಡಲೇ ಬೂದಿಯಾಗಿ ಬೀಳುತ್ತಾರೆ.
ಮತ್ತೊಮ್ಮೆ ತಪಸ್ಸಿನಲ್ಲಿ ನಿರತನಾಗಿದ್ದ ಶಿವನ ಮೇಲೆ ಮರದ ಹಿಂದೆ ಅಡಗಿದ್ದ ಕಾಮದೇವ ಬಾಣ ಬಿಡುತ್ತಾನೆ. ಇದು ಅರಿವಾಗುತ್ತಲೇ ಕೋಪದಿಂದ ಶಿವ ಮೂರನೇ ಕಣ್ಣನ್ನು ತೆರೆದು ಕಾಮನನ್ನು ಸಂಪೂರ್ಣ ದಹಿಸಿ ಬಿಡುತ್ತಾನೆ.
ಅಂದರೆ, ಶಿವನ ಮೂರನೇ ಕಣ್ಣು ಕರ್ಮಗಳ ನೆನಪಿನ ಶಕ್ತಿಯಾಗಿದೆ. ಪ್ರತಿಯೊಬ್ಬರಿಗೂ ಅವರವರ ಕರ್ಮದ ಅನುಸಾರ ಆತ ಶಿಕ್ಷೆ ಕೊಡುವುದೋ ಅಥವಾ ವರ ಕೊಡುವುದೋ ಮಾಡುತ್ತಾನೆ.
ಮುಕ್ಕೋಟಿ ದೇವರಲ್ಲಿ ಮುಕ್ಕಣ್ಣ ಮಾತ್ರ ಈ ಭೌತಿಕ ಹಾಗೂ ಶಾಶ್ವತ ಜಗತ್ತಿನ ನಡುವೆ ನಿಂತಿರುವುದು. ಆತ ಸಾವು ಹಾಗೂ ಕಾಲವನ್ನು ನಿಯಂತ್ರಿಸುವಾತ. ಎಲ್ಲವನ್ನೂ ಅವುಗಳ ಭೌತಿಕ ಸ್ವರೂಪದ ಹೊರತಾಗಿಯೂ ಕಾಣಲು ಸಾಧ್ಯವಿರುವವನು. ಒಳಿತಿಗಾಗಿ ನಕಾರಾತ್ಮಕವಾದುದನ್ನು ನಾಶ ಮಾಡುವವನು.
ಶಿವನಿಗಿರುವ ಎರಡು ಕಣ್ಣುಗಳು ಈ ಭೌತಿಕ ಜಗತ್ತಿನ ಚಟುವಟಿಕೆಗಳನ್ನು ಪ್ರತಿನಿಧಿಸುತ್ತವೆ. ಆತ ಅವನ್ನು ಇಲ್ಲಿ ನಡೆವ ಪ್ರತಿಯೊಂದನ್ನೂ ನಿಯಂತ್ರಿಸಲು ಬಳಸುತ್ತಾನೆ. ಆದರೆ, ಮೂರನೇ ಕಣ್ಣನ್ನು ಭೌತಿಕ ಜಗತ್ತಿನ ಹೊರತಾದ ಸಂಗತಿಗಳನ್ನು ನೋಡಲು ಬಳಸುತ್ತಾನೆ.
ಮೂರನೇ ಕಣ್ಣು ಸಾಮಾನ್ಯವಾಗಿ ಮುಚ್ಚಿಯೇ ಇರುತ್ತದಾದರೂ ಅದು ತೆರೆದ ಕ್ಷಣ ಪ್ರಳಯವಾಗುತ್ತದೆ. ಏಕೆಂದರೆ ಶಿವನ ಮೂರನೇ ಕಣ್ಣು ನಿಗೂಢವಾಗಿದ್ದು, ಅದು ಭೌತಿಕವಲ್ಲದ ವಿಷಯಗಳನ್ನು ನೋಡುತ್ತದೆ. ಅಂದರೆ, ಕೋಪ, ಮೋಹ, ದುರಾಸೆ, ಕೆಟ್ಟತನ, ನಕಾರಾತ್ಮಕತೆ, ಹಸಿವು ಹಾಗೂ ನೋವು. ಇಂಥ ಭೌತಿಕ ಭಾವನೆಗಳನ್ನು ಒಳಿತಿಗಾಗಿ ನಾಶ ಮಾಡುತ್ತಾನೆ.
ಇದನ್ನೇ ವಿಸ್ತಾರ ಸ್ವರೂಪದಲ್ಲಿ ಹೇಳುವುದಾದರೆ ನಮ್ಮೊಳಗಿನ ಅಂತಃದೃಷ್ಟಿಯನ್ನೇ ಮೂರನೇ ಕಣ್ಣು ಎನ್ನುವುದು. ಒಳಗಣ್ಣು ತೆರೆದಾಗ ನಮಗೆ ನಮ್ಮ ಎಲ್ಲ ದುರಾಸೆಗಳಿಂದ ಮುಕ್ತಿ ಸಿಗುತ್ತದೆ. ನಾವು ಎಲ್ಲವನ್ನೂ ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುತ್ತದೆ. ನಮ್ಮ ಒಳಗಣ್ಣು ಜಾಗೃತವಾದಾಗ ನಾವು ನಮ್ಮೆಲ್ಲ ನಕಾರಾತ್ಮಕತೆಯಿಂದ ಮುಕ್ತರಾಗುವತ್ತ ಗಮನ ಹರಿಸುತ್ತೇವೆ. ಅದನ್ನೇ ಮೂರನೇ ಕಣ್ಣಿನಿಂದ ಕೆಡುಕನ್ನು ನಾಶ ಮಾಡುವುದು ಎನ್ನುವುದು.