ಇಂದು ಹಲವು ರೀತಿಯ ರೋಗಗಳು ನಮ್ಮನ್ನು ಕಾಡುತ್ತಿರುವುದರಿಂದ ತಾವು ಇಷ್ಟಪಡುವ ಆಹಾರವನ್ನು ಸೇವಿಸಲಾಗದೆ, ವೈದ್ಯರು ಸೂಚಿಸಿದ ಆಹಾರವನ್ನಷ್ಟೆ ಸೇವಿಸಬೇಕಾದ ಪರಿಸ್ಥಿತಿ ಬಹಳಷ್ಟು ಜನರದ್ದಾಗಿದೆ.ಅವತ್ತು ಹೊತ್ತಿನ ಊಟಕ್ಕೂ ತೊಂದರೆಯಿತ್ತು. ಇವತ್ತು ಎಲ್ಲವೂ ಇದೆ ಆದರೆ, ಇಷ್ಟಪಟ್ಟಿದ್ದನ್ನು ತಿನ್ನಲಾರದ ಸ್ಥಿತಿಯಾಗಿದೆ ಎಂದು ಕೆಲವರು ಕೊರಗುತ್ತಿರುತ್ತಾರೆ. ಇದು ತುಂಬಾ ಜನರು ಎದುರಿಸುತ್ತಿರುವ ಸಮಸ್ಯೆ. ಇದಕ್ಕೆ ಕಾರಣಗಳು ನಮಗೆ ತಗುಲಿರುವ ರೋಗ ಎಂದರೆ ತಪ್ಪಾಗಲಾರದು. ಕೆಲವೊಂದು ರೋಗಗಳನ್ನು ನಿಯಂತ್ರಿಸಬೇಕಾದರೆ ಆಹಾರ ಸೇವನೆಯಲ್ಲಿ ಪಥ್ಯ ಅನಿವಾರ್ಯವಾಗಿದೆ. ಹೀಗಾಗಿ ತಮಗಿಷ್ಟವಾದ ಆಹಾರವನ್ನು ಸೇವಿಸಲಾಗುತ್ತಿಲ್ಲವಲ್ಲ ಎಂಬ ನೋವು ಹೆಚ್ಚಿನವರನ್ನು ಕಾಡುತ್ತಿರುತ್ತದೆ.
ಕೆಲವು ಕ್ರಮ ಅಳವಡಿಕೊಳ್ಳಬೇಕು–ಕೆಲವೊಂದು ಕಾಯಿಲೆ ನಮಗೆ ತಗುಲಲು ಧೂಮಪಾನ, ಮದ್ಯಪಾನ, ತಂಬಾಕು ಹೀಗೆ ಕೆಲವೊಂದು ದುಶ್ಚಟವೂ ಕಾರಣ ಇರಬಹುದು. ದುಶ್ಚಟವೇ ಇಲ್ಲದವರಿಗೂ ಕಾಯಿಲೆ ಬಂದಿದ್ದರೆ ಅದಕ್ಕೆ ನಮ್ಮ ಆಹಾರ ಸೇವನೆಯಲ್ಲಿನ ಆಶಿಸ್ತು ಕಾರಣ ಎಂದರೆ ತಪ್ಪಾಗಲಾರದು. ನಮ್ಮ ಆರೋಗ್ಯ ಕೈಕೊಟ್ಟಾಗ ಮಾತ್ರ ನಮಗೆ ಆರೋಗ್ಯದ ಮಹತ್ವ ಅರಿವಿಗೆ ಬರುತ್ತದೆ. ಹೀಗಾಗಿ ಸಾಧ್ಯವಾದಷ್ಟು ನಮ್ಮ ದೈನಂದಿನ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾದ ಕೆಲವೊಂದು ಕ್ರಮಗಳತ್ತ ನಾವು ನಿಗಾವಹಿಸಬೇಕಾಗಿದೆ.
ಒಂದಷ್ಟು ಕಾಯಿಲೆಗಳಿಗೆ ನಮ್ಮ ಆಹಾರ ಪದ್ಧತಿಯೇ ಕಾರಣ ಎಂದರೆ ತಪ್ಪಾಗಲಾರದು. ಅದರಲ್ಲೂ ಇತ್ತೀಚಿಗಿನ ಪಾಶ್ಚಿಮಾತ್ಯ ಆರೋಗ್ಯ ಪದ್ಧತಿಯತ್ತ ವಾಲಿರುವ ನಾವು, ಬಾಯಿರುಚಿಗಾಗಿ ನಮ್ಮ ದೇಹಕ್ಕೆ ಒಗ್ಗದ ಪದಾರ್ಥಗಳನ್ನೆಲ್ಲ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಎನ್ನುವುದಂತು ನಿಜ. ಮನಸ್ಸಿಗೆ ಇಷ್ಟವಿಲ್ಲದನ್ನು ಹಸಿವಿನ ಕಾರಣಕ್ಕೆ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಬದಲು ಮನಸ್ಸಿಗೆ ಮತ್ತು ದೇಹಕ್ಕೆ ಹೊಂದುವ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ.
ಬೆಳಗ್ಗಿನ ಉಪಹಾರ ಆರೋಗ್ಯಕ್ಕೆ ಅತ್ಯಗತ್ಯ-ಇನ್ನು ನಮ್ಮ ಆಹಾರದ ಕ್ರಮಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವು ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ಯಾವ್ಯಾವುದೋ ಸಮಯಕ್ಕೆ ಆಹಾರ ಸೇವಿಸುವ ಬದಲು ನಿರ್ದಿಷ್ಟ ಸಮಯವನ್ನು ಕಾಪಾಡಿಕೊಳ್ಳಬೇಕು. ಕೆಲವರು ಬೆಳಗ್ಗಿನ ಆಹಾರ ಸೇವನೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ತಮ್ಮೆಲ್ಲ ಕೆಲಸಗಳನ್ನು ಮುಗಿಸಿಕೊಂಡು ನಿಧಾನವಾಗಿ ಮನಸ್ಸು ಬಂದ ಸಮಯಕ್ಕೆ ಮಾಡಿ ಮುಗಿಸುತ್ತಾರೆ. ಇದು ಆರೋಗ್ಯದ ದೃಷ್ಟಿಯಲ್ಲಿ ಮಾರಕ. ವೈದ್ಯರು ಹೇಳುವ ಪ್ರಕಾರ ಬೆಳಗ್ಗಿನ ಉಪಹಾರ ದೇಹದ ಆರೋಗ್ಯಕ್ಕೆ ಅತ್ಯಗತ್ಯ. ಅಲ್ಲದೆ ಅದು ದಿನದ ಅತೀ ಮುಖ್ಯವಾದ ಆಹಾರವಂತೆ. ಹೀಗಾಗಿ ಯಾವುದೇ ಕಾರಣಕ್ಕೂ ಬೆಳಗ್ಗಿನ ಉಪಹಾರವನ್ನು ತಪ್ಪಿಸಿಕೊಳ್ಳಬೇಡಿ ಎಂಬ ಸಲಹೆ ವೈದ್ಯರದ್ದಾಗಿದೆ.
ತುಂಬಾ ಹಸಿದುಕೊಂಡಿರುವುದು ಮತ್ತು ಒಮ್ಮೆಲೆ ಹೊಟ್ಟೆ ತುಂಬಾ ತಿಂದು ಬಿಡುವುದು ಆಹಾರ ಸೇವನೆಯ ಲಕ್ಷಣವಲ್ಲವಂತೆ. ಆದ್ದರಿಂದ ಆಹಾರ ಸೇವನೆಯ ವಿಚಾರದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಅತ್ಯಗತ್ಯ. ನಾವೆಲ್ಲರೂ ಕಷ್ಟಪಟ್ಟು ದುಡಿಯುವುದು ಹೊಟ್ಟೆಗಾಗಿ. ಹೀಗಿರುವಾಗ ನಮ್ಮ ದುಡಿಮೆಯ ನಡುವೆ ಒಂದಷ್ಟು ಸಮಯವನ್ನು ಆಹಾರ ಸೇವನೆಗೆ ತೆಗೆದಿಡದೆ ಹೋದರೆ ಪ್ರಯೋಜನವೇನು?
ಊಟ ಮಾಡಿದ ತಕ್ಷಣ ಮಲಗಬೇಡಿ-ರಾತ್ರಿ ಊಟ ಮಾಡಿದ ತಕ್ಷಣ ಮಲಗದೆ, ಮಲಗುವ ಕನಿಷ್ಟ 2ಗಂಟೆ ಮೊದಲು ಆಹಾರ ಸೇವಿಸಿದರೆ ಉತ್ತಮ. ರುಚಿಯಾಗಿದೆ ಎಂಬ ಕಾರಣಕ್ಕೆ ಹೆಚ್ಚು ತಿನ್ನದೆ ಮಿತ ಸೇವನೆ ಮುಖ್ಯ. ದೇಹದ ತೂಕ ಹೆಚ್ಚಾಗಿ ಬೊಜ್ಜು ಬೆಳೆಯದಂತೆ ಮಾಡಲು ಮುಂಜಾನೆ ವಾಯುವಿಹಾರ, ವ್ಯಾಯಾಮ ಮಾಡುವುದು ಒಳ್ಳೆಯ ಅಭ್ಯಾಸ. ವಯಸ್ಸಾಗುತ್ತಿದ್ದಂತೆ ಕಡಿಮೆ ಆಹಾರ ಸೇವಿಸಿ ಹೆಚ್ಚು ವ್ಯಾಯಾಮ ಮಾಡುವುದು ಒಳ್ಳೆಯದು. ಪ್ರತಿ ದಿನ ಆಹಾರ ಮಾತ್ರವಲ್ಲದೆ ಸುಮಾರು 8 ರಿಂದ 12 ಲೋಟಗಳಷ್ಟು ನೀರು ಸೇವನೆ ಮಾಡಬೇಕು. ಇದರಿಂದ ದೇಹದಲ್ಲಿರುವ ಬೇಡದ ಅಂಶಗಳು ಹೊರಹೋಗಲು ಸಾಧ್ಯವಾಗುತ್ತದೆ.
ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಬೇಕು. ಇದರಿಂದ ಹೊಟ್ಟೆ ಉಬ್ಬರ ತಡೆಯಬಹುದಲ್ಲದೆ, ಪ್ರೊಟೀನ್ ಅಂಶ ಹೆಚ್ಚಿಸಲು ಸಾಧ್ಯವಾಗುತ್ತದೆ. ಧಾನ್ಯಗಳನ್ನು ಸೇವಿಸಬೇಕು ಆದರೆ ಮರು ಸಂಸ್ಕರಣೆ ಮಾಡಿದ ಹಿಟ್ಟುಗಳನ್ನು ದೂರವಿಡಬೇಕು. ಕೊಬ್ಬಿನ ಅಂಶವಿರುವ ಡಾಲ್ಡಾ, ವನಸ್ಪತಿಗಳನ್ನು ಕಡಿಮೆ ಮಾಡಬೇಕು. ಅಷ್ಟೇ ಅಲ್ಲ ಸಕ್ಕರೆ ಮತ್ತು ಉಪ್ಪು ಸೇವನೆ ಮಿತವಾಗಿರಲಿ. ಇವುಗಳ ಪ್ರಮಾಣ ಹೆಚ್ಚಾದಷ್ಟು ಮಧುಮೇಹ, ಬೊಜ್ಜು, ರಕ್ತದೊತ್ತಡ, ಹೃದಯಾಘಾತ ಮೊದಲಾದ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ.
ಕಠಿಣ ಕ್ರಮ ಅನುಸರಣೆ ಅನಿವಾರ್ಯ-ಕಾರ್ಬೋನೇಟೆಡ್ ಪಾನೀಯಗಳು, ಕರಿದ ತಿಂಡಿಗಳು, ಧೂಮಪಾನ, ಮದ್ಯಪಾನ ಮೊದಲಾದವುಗಳಿಂದ ದೂರವಿದ್ದಷ್ಟು ಒಳ್ಳೆಯದು. ಈಗಾಗಲೇ ಪಥ್ಯಾಹಾರ ಮಾಡುತ್ತಿರುವವರು ಅದನ್ನು ಮುಂದುವರೆಸುವುದನ್ನು ಮರೆಯಬಾರದು. ಕೆಲವೊಂದು ಕಾಯಿಲೆಗೆ ವೈದ್ಯರ ಸಲಹೆಯಂತೆಯೇ ಆಹಾರ ಸೇವಿಸುವುದು ಅನಿವಾರ್ಯ. ಕೆಲವೊಮ್ಮೆ ಬಾಯಿಚಪಲಕ್ಕೆ ತಮಗಿರುವ ಕಾಯಿಲೆ ಮತ್ತು ವೈದ್ಯರ ಸಲಹೆಯನ್ನು ಬದಿಗೊತ್ತಿ ಇಷ್ಟವಾದ ಆಹಾರವನ್ನು ಹೊಟ್ಟೆ ತುಂಬಾ ಸೇವಿಸಿ ಆರೋಗ್ಯ ಹದಗೆಡಿಸಿಕೊಂಡು ನರಳುವುದು ಒಳ್ಳೆಯದಲ್ಲ. ಒಂದಷ್ಟು ದಿನ ಆರೋಗ್ಯವಂತರಾಗಿ ಬದುಕಬೇಕಬೇಕಾದರೆ ಕೆಲವೊಂದು ಕಠಿಣ ಕ್ರಮಗಳನ್ನು ಅನುಸರಿಸಲೇ ಬೇಕಾಗುತ್ತದೆ.