ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ತಾಮ್ರದ ಪಾತ್ರೆಗಳಿಂದ ನೀರು ಕುಡಿಯುತ್ತಾ ಬಂದಿದ್ದಾರೆ ಹಾಗೂ ಇದರ ಪ್ರಯೋಜನಗಳನ್ನು ಪಡೆದಿದ್ದಾರೆ. ಇಂದಿಗೂ ಹಲವು ಹಿರಿಯರು ತಾಮ್ರದ ಲೋಟಗಳಿಂದಲೇ ನೀರು ಕುಡಿಯುವುದನ್ನು ಬೆಂಬಲಿಸುತ್ತಾರೆ. ಆದರೆ ಯುವಜನತೆ ಕೈಗೆ ಸಿಕ್ಕಿದ ಪ್ಲಾಸ್ಟಿಕ್ ಅಥವಾ ಇತರ ಲೋಹಗಳ ಲೋಟಗಳಿಂದಲೇ ನೀರು ಕುಡಿಯುತ್ತಾರೆ. ಇಂದು ನಮ್ಮ ಹಳೆಯ ಸಂಪ್ರದಾಯಗಳು ವೈಜ್ಞಾನಿಕ ಕಾರಣಗಳಿಂದಾಗಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ಇವುಗಳಲ್ಲೊಂದು ತಾಮ್ರದ ಪಾತ್ರೆಗಳ ಮರುಬಳಕೆ. ಇದಕ್ಕೂ ಮುನ್ನ ತಾಮ್ರ ನಮ್ಮ ದೇಹಕ್ಕೇಕೆ ಅವಶ್ಯ ಎಂಬುದನ್ನು ನೋಡೋಣ…
ತಾಮ್ರದ ಮಹತ್ವ–ತಾಮ್ರವು ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳಲ್ಲಿ ಒಂದಾಗಿದೆ, ಇದು ಹಲವಾರು ಆರೋಗ್ಯಕರ ಪ್ರಯೋಜನ ಗಳನ್ನು ನೀಡುತ್ತದೆ. ಇದು ಕೆಂಪು ರಕ್ತ ಕಣಗಳು ಮತ್ತು ಕೊಲ್ಯಾಜೆನ್ಗಳನ್ನು ನಿರ್ಮಿಸಲು ಅಗತ್ಯವಾಗಿವೆ. ಅಲ್ಲದೇ ಆಹಾರದಿಂದ ದೇಹಕ್ಕೆ ಅಗತ್ಯವಿರುವ ಶಕ್ತಿಯ ಉತ್ಪಾದನೆ ಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ಪ್ರಾಚೀನ ಭಾರತದಲ್ಲಿ ತಾಮ್ರದ ಪಾತ್ರೆಗಳ ಬಳಕೆ–ಅಧ್ಯಾಯನದ ವರದಿಯ ಪ್ರಕಾರ ತಾಮ್ರದ ಪಾತ್ರೆಗಳಲ್ಲಿ ಸುಮಾರು ಹದಿನಾರು ಗಂಟೆಗಳ ಕಾಲ ಶೇಖರಿಸಿಟ್ಟ ನೀರಿನಲ್ಲಿ ಸಾಲ್ಮೋನೆಲ್ಲಾ ಮತ್ತು ಈ ಕೊಲೈಗಳಂತರ ಮಾರಕ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತವೆ. ಅಲ್ಲದೇ ನೀರು ಕುಡಿಯುವ ಅರ್ಹತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುತ್ತದೆ. ಈ ಬಗ್ಗೆ ನಡೆದ ಅಧ್ಯಯನಗಳಲ್ಲಿ ಈ ಮಾಹಿತಿ ಪ್ರಮುಖವಾಗಿ ಕಂಡುಬಂದಿದ್ದು ಇನ್ನೂ ಹಲವಾರು ಪ್ರಯೋಜನಗಳನ್ನು ವಿವರಿಸಿವೆ.
ತಾಮ್ರದ ಪಾತ್ರೆಯ ನೀರು ಆರೋಗ್ಯಕ್ಕೆ ಸುರಕ್ಷಿತವೇ?–ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನಂತರ, ನೀರಿನಲ್ಲಿ ತಾಮ್ರದ ಅಂಶ ಆರೋಗ್ಯಕ್ಕೆ ಸಾಕಷ್ಟಾಗುವ ಮಿತಿಯನ್ನು ಮೀರಿ ಹೆಚ್ಚಾಗುತ್ತದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದನ್ನು ತಾಮ್ರದ ಪಾತ್ರೆಯಿಂದ ಕುಡಿಯುವ ನೀರಿನ ಅಡ್ಡಪರಿಣಾಮಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಆದರೆ ವಿಶ್ವ ಆರೋಗ್ಯ ಸಂಸ್ಥೆ ಈ ಆರೋಪದಲ್ಲಿ ಹುರುಳಿಲ್ಲ ಎಂದಿದೆ. ಮತ್ತು ಅಧ್ಯಯನವೊಂದರಲ್ಲಿ ನೀರಿಗೆ ಬಿಡುಗಡೆಗೊಂಡ ತಾಮ್ರದ ಅಂಶ ಅನುಮತಿಸುವ ಮಿತಿಯೊಳಗೇ ಉಳಿಯುತ್ತದೆ ಹಾಗೂ ಈ ನೀರು ಆರೋಗ್ಯಕರ ಮತ್ತು ಸುರಕ್ಷಿತ ಎಂದು ತಿಳಿಸಿದೆ.
ಪೂರ್ವಜರ ಕಾಲದಿಂದಲೂ ಇದರ ಮಹತ್ವ ಅಪಾರ–ತಾಮ್ರದ ಪಾತ್ರೆಗಳಿಂದ ನೀರು ಕುಡಿಯುವ ಪ್ರಾಚೀನ ಭಾರತೀಯ ಅಭ್ಯಾಸದ ಹಿಂದಿನ ವಿಜ್ಞಾನವನ್ನು ಇತರ ಹಲವಾರು ಅಧ್ಯಯನಗಳೂ ಬೆಂಬಲಿಸಿವೆ ಹಾಗೂ ಎಲ್ಲವೂ ಸಕಾರಾತ್ಮಕ ತೀರ್ಮಾನವನ್ನೇ ನೀಡಿವೆ. ಒಂದು ವೇಳೆ ನೀವು ಕುಡಿಯುವ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ಬಯಸಿದರೆ, ಅದನ್ನು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ನಾಲ್ಕು ಗಂಟೆಗಳ ಕಾಲ ಸಂಗ್ರಹಿಸಿಟ್ಟ ಬಳಿಕ ಕುಡಿಯಿರಿ ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವ ಮೂಲಕ ಲಭಿಸುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈಗ ನೋಡೋಣ…
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ–ತಾಮ್ರದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಈ ನೀರನ್ನು ಕುಡಿಯುವ ಮೂಲಕ ಹೊಟ್ಟೆಯಲ್ಲಿರುವ ಹಲವಾರು ಕಾಯಿಲೆ ಬರಿಸುವ ಬ್ಯಾಕ್ಟೀರಿಯಾಗಳನ್ನು ಕೊಂದು ಜೀರ್ಣವ್ಯವಸ್ಥೆಯನ್ನ ಉತ್ತಮ ಗೊಳಿಸಲು ನೆರವಾಗುತ್ತದೆ. ಅಲ್ಲದೇ ವಿಶೇಷವಾಗಿ ಜಠರ ಮತ್ತು ಕರುಳುಗಳಲ್ಲಿ ಎದುರಾಗುವ ಹುಣ್ಣುಗಳನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ದೇಹದಿಂದ ಕಲ್ಮಶಗಳನ್ನು ನಿವಾರಿಸಲು ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ಕುಡಿಯಬೇಕು. ನೀವು ತಾಮ್ರದ ಪಾತ್ರೆಯಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿದಾಗ ತಾಮ್ರದ ಅಂಶ ನೀರಿನಲ್ಲಿ ಬೆರೆತುಕೊಳ್ಳುತ್ತದೆ. ಈ ಅಂಶದಿಂದ ಸಮೃದ್ಧವಾದ ನೀರು ಆಹಾರ ಕಣಗಳನ್ನು ಹೆಚ್ಚು ಕ್ಷಮತೆಯಿಂದ ಒಡೆಯುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ನೀವು ಬಯಸಿದರೆ, ತಾಮ್ರದ ಅಂಶವಿರುವ ನೀರನ್ನು ಕುಡಿಯುವ ಮೂಲಕ ಸುಲಭವಾಗಿ ನಿರ್ವಹಿಸಲ್ಬಹುದು.
ವೃದ್ಧಾಪ್ಯ ನಿಧಾನಗೊಳಿಸುತ್ತದೆ–ವೃದಾಪ್ಯದ ಚಿಹ್ನೆಗಳಾದ ನೆರಿಗೆಗಳು ವಯಸ್ಸಾದಂತೆ ಹೆಚ್ಚು ಆಳವಾಗುತ್ತವೆ. ತಾಮ್ರದಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗುಣಗಳಿದ್ದು ಜೀವಕೋಶಗಳ ಹುಟ್ಟುವಿಕೆಗೆ ನೆರವಾಗ್ತುತದೆ. ಅಲ್ಲದೇ ಫ್ರೀ ರ್ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳನ್ನು ಹಿಮ್ಮೆಟ್ಟಿಸಲೂ ತಾಮ್ರ ನೆರವಾಗುವ ಮೂಲಕ ಈ ಗುರುತುಗಳು ಮೂಡುವುದನ್ನು ತಡವಾಗಿಸುತ್ತದೆ.
ಹೃದಯಕ್ಕೆ, ವಿಶೇಷವಾಗಿ ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯದು–ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ಹೃದಯದ ಬಡಿತವನ್ನು ಕ್ರಮಬದ್ದಗೊಳಿಸಲು ತಾಮ್ರ ಉತ್ತಮವಾಗಿದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಅಧಿಕ ರಕ್ತದೊತ್ತಡವನ್ನು ತಗ್ಗಿಸಲೂ ನೆರವಾಗುತ್ತದೆ.
ಸಂಧಿವಾತ ಮತ್ತು ಉರಿಯೂತಕ್ಕೆ ಒಳಗಾದ ಸಂಧುಗಳಿಗೆ ಒಳ್ಳೆಯದು–ತಾಮ್ರದಲ್ಲಿರುವ ಉರಿಯೂತ ನಿವಾರಕ ಗುಣ ಉರಿಯೂತಕ್ಕೆ ಒಳಗಾದ ಸಂಧುಗಳಿಗೆ ಮತ್ತು ಸಂಧಿವಾತ ಕಡಿಮೆಯಾಗಿಸಲು ನೆರವಾಗುತ್ತದೆ. ಈ ತೊಂದರೆ ಇರುವವರು ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯಲು ಪ್ರಾರಂಭಿಸುವುದು ಉತ್ತಮ
ರಕ್ತಹೀನತೆಯ ತೊಂದರೆ ಇಲ್ಲವಾಗಿಸುತ್ತದೆ–ದೇಹದಲ್ಲಿ ತಾಮ್ರ ಕಡಿಮೆಯಾದರೆ ನಮ್ಮ ದೇಹ ಕಬ್ಬಿಣವನ್ನು ಹೀರಿಕೊಳ್ಳುವ ಸಾಮರ್ಥವೂ ಕಡಿಮೆಯಾಗುತ್ತದೆ. ಪರಿಣಾಮ, ರಕ್ತಹೀನತೆ. ಹಾಗಾಗಿ ಆಹಾರದಲ್ಲಿ ಕಬ್ಬಿಣದ ಅಂಶವಿದ್ದರೂ, ಇದನ್ನು ಹೀರಿಕೊಳ್ಳಲು ತಾಮ್ರದ ನೆರವು ಬೇಕೇ ಬೇಕು. ತಾಮ್ರದ ಅಂಶ ದೇಹದಲ್ಲಿ ಹೆಚ್ಚಿದರೆ ಕಬ್ಬಿಣದ ಅಂಶವೂ ಹೆಚ್ಚುತ್ತದೆ, ತನ್ಮೂಲಕ ರಕ್ತಹೀನತೆಯ ತೊಂದರೆ ಇಲ್ಲವಾಗಿಸುತ್ತದೆ
ಗಾಯಗಳು ಶೀಘ್ರವಾಗಿ ಮಾಗಲು ನೆರವಾಗುತ್ತದೆ–ತಾಮ್ರದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ವೈರಸ್ ನಿವಾರಕ ಗುಣಗಳು ನಮ್ಮ ದೇಹದ ಸರಿಪಡಿಸಿಕೊಳ್ಳುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅಲ್ಲದೇ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಹಾಗಾಗಿ ಕೇವಲ ಬಾಹ್ಯ ಗಾಯಗಳು ಮಾತ್ರವಲ್ಲ, ಆಂತರಿಕ ಗಾಯಗಳೂ ಶೀಘ್ರವಾಗಿ ಮಾಗುತ್ತವೆ.
ಚರ್ಮದ ಆರೋಗ್ಯ ಮತ್ತು ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ–ನಿಮ್ಮ ಚರ್ಮದ ಆರೋಗ್ಯವನ್ನು ಉತ್ತಮಗೊಳಿಸಲು ತಾಮ್ರವೂ ನೆರವು ನೀಡುತ್ತದೆ. ಇದು ನಿಮ್ಮ ಚರ್ಮ, ಕೂದಲು ಮತ್ತು ಕಣ್ಣುಗಳ ಬಣ್ಣಕ್ಕೆ ಕಾರಣವಾಗುವ ವರ್ಣದ್ರವ್ಯವಾದ ಮೆಲನಿನ್ ಉತ್ಪಾದನೆ ಯನ್ನು ಹೆಚ್ಚಿಸುತ್ತದೆ. ತನ್ಮೂಲಕ ಕೂದಲು ಉದುರುವುದನ್ನು ತಡೆಯುತ್ತದೆ. ತಾಮ್ರದ ಅಂಶ ಅದರ ಕೋಶ ಉತ್ಪಾದಿಸುವ ಗುಣಲಕ್ಷಣಗಳಿಂದಾಗಿ ಚರ್ಮದ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚರ್ಮದ ಮೃದುತ್ವ, ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನೂ ಹೆಚ್ಚಿಸುತ್ತದೆ.
ಅತಿಸೂಕ್ಷ್ಮಜೀವಿಗಳಿಂದ ಎದುರಾಗುವ ಸೋಂಕುಗಳ ವಿರುದ್ಧ ಹೋರಾಡುತ್ತದೆ–ತಾಮ್ರವು ಅತಿಸೂಕ್ಷ್ಮಜೀವಿ ನಿರೋಧಕ ಗುಣವನ್ನು ಹೊಂದಿದೆ ಎಂದು ಸಾಬೀತಾಗಿದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ ಮತ್ತು ಸೋಂಕಿನ ವಿರುದ್ಧ ಪ್ರಬಲವಾಗಿ ಹೋರಾಡಲು ನೆರವಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವ ಬಗ್ಗೆ ಸಲಹೆಗಳು, ಸರಿಯಾದ ಮತ್ತು ಸುರಕ್ಷಿತ ವಿಧಾನ: ಈಗಾಗಲೇ ಚರ್ಚಿಸಿದಂತೆ ತಾಮ್ರದ ಪಾತ್ರೆಯಿಂದ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ. ಆದರೆ, ಕೇವಲ ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದು ಸಾಕಾಗುವುದಿಲ್ಲ. ಗರಿಷ್ಠ ಪ್ರಯೋಜನಗಳನ್ನು ಪಡೆಯಬೇಕಾದರೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಸರಿಯಾಗಿ ಮತ್ತು ಸುರಕ್ಷಿತ ಕ್ರಮದಲ್ಲಿ ಸಂಗ್ರಹಿಸಿಟ್ಟು ಕುಡಿಯುವುದು ಅತ್ಯಗತ್ಯ. ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯಲು ಕೆಲವು ಸಲಹೆಗಳು ಇಲ್ಲಿವೆ.
ತಾಮ್ರದ ಪಾತ್ರೆ ನಿರ್ಮಿಸಲು ಬಳಸುವ ತಾಮ್ರದ ತಗಡಿನ ಗುಣಮಟ್ಟವು ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕೃತ ತಾಮ್ರ ಮಾರಾಟಗಾರರಿಂದ ತಾಮ್ರದ ಪಾತ್ರೆಯನ್ನು ಖರೀದಿಸಿ. ಅಲ್ಲದೆ, ಈ ಪಾತ್ರೆ 100% ತಾಮ್ರದಿಂದ ಮಾಡಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಹೊಸ ತಾಮ್ರದ ಜಗ್ ಅಥವಾ ಬಾಟಲಿಯನ್ನು ಖರೀದಿಸಿದ ನಂತರ, ಅದರಿಂದ ನೇರವಾಗಿ ನೀರನ್ನು ಕುಡಿಯಬೇಡಿ. ಬದಲಾಗಿ, ಮೊದಲಿಗೆ ನೈಸರ್ಗಿಕ ಆಮ್ಲೀಯ ದ್ರಾವಣದಿಂದ ತೊಳೆದು ಒಣಗಿಸಿ. ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಲು ನೀವು ನಿಂಬೆ ಮತ್ತು ಉಪ್ಪನ್ನು ಸಹಾ ಬಳಸಬಹುದು.
ತಾಮ್ರದ ಪಾತ್ರೆಯಲ್ಲಿ ಸಂಗ್ರಹವಾಗಿರುವ ನೀರಿನ ಗರಿಷ್ಠ ಲಾಭವನ್ನು ಪಡೆಯಲು ನೀವು ಬಯಸಿದರೆ, ನಂತರ ನೀರನ್ನು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ಎಂಟು ಗಂಟೆಗಳ ಕಾಲ ಸಂಗ್ರಹಿಸಿ.ನೀವು ರಾತ್ರಿಯಲ್ಲಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ನಂತರ ಮುಂಜಾನೆ ಕುಡಿಯಬಹುದು. ತಾಮ್ರದ ಪಾತ್ರೆಯಲ್ಲಿ 12 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹವಾಗಿರುವ ನೀರನ್ನು ಕುಡಿಯಬೇಡಿ.
ನೀರನ್ನು ಹೊರತುಪಡಿಸಿ ಯಾವುದೇ ದ್ರವವನ್ನು ಸಂಗ್ರಹಿಸಬೇಡಿ.ತಾಮ್ರದ ಬಾಟಲ್ ಅಥವಾ ಜಗ್ ಅನ್ನು ಎಂದಿಗೂ ಫ್ರೀಜರ್ ನಲ್ಲಿ ಇರಿಸಬೇಡಿಕುಡಿಯುವ ನೀರನ್ನು ದಿನವಿಡೀ ತಾಮ್ರದ ಪಾತ್ರೆಯಲ್ಲಿಇಡಬೇಡಿ. ಅತಿಯಾದರೆ ಅಮೃತವೂ ವಿಷವಂತೆ, ಮತ್ತು ತಾಮ್ರದ ವಿಷಯದಲ್ಲೂ ಅದೇ ಅನ್ವಯವಾಗುತ್ತದೆ.ತಾಮ್ರದ ಅಂಶವಿರುವ ನೀರನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯುದು ದೇಹದಲ್ಲಿ ತಾಮ್ರದ ಪ್ರಮಾಣವನ್ನು ಸಮತೋಲನದಲ್ಲಿರಿಸಲು ಬೇಕಾದಷ್ಟಾಯಿತು.
ತಾಮ್ರದ ಬಗ್ಗೆ ಇರುವ ಮಿಥ್ಯೆಗಳು–ನಿಮ್ಮ ದೇಹಕ್ಕೆ ತಾಮ್ರವು ವಿಷಕಾರಿಯಾಗಿದೆ ಎಂಬುದು ಒಂದು ಪ್ರಚಲಿತ ಮಿಥ್ಯೆಯಾಗಿದೆ. ಆದರೆ ಇದು ನಿಜವಲ್ಲ; ವಾಸ್ತವವಾಗಿ, ತಾಮ್ರವು ದೇಹದ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ಇದು ನಮ್ಮ ಕಿಣ್ವ ವ್ಯವಸ್ಥೆಗೆ ಅಗತ್ಯವಿರುವ ಒಂದು ಪ್ರಮುಖ ಖನಿಜವಾಗಿದೆ, ಮತ್ತು ಇದು ವಿಭಿನ್ನ ರೀತಿಯ ಜೀವ ರಾಸಾಯನಿಕ ಕ್ರಿಯೆಗಳು ನಡೆಯಲು ಸಹಾಯ ಮಾಡುತ್ತದೆ. ಆದರೆ ತುಕ್ಕು ಹಿಡಿದ ತಾಮ್ರವನ್ನು ಸೇವಿಸಿದರೆ ಮಾತ್ರ ತಾಮ್ರವು ವಿಷಕಾರಿಯಾಗುತ್ತದೆ. ಆದ್ದರಿಂದ 100% ತಾಮ್ರದಿಂದ ಮಾಡಿದ ತಾಮ್ರದ ಜಗ್ ಅಥವಾ ಬಾಟಲಿಯನ್ನು ಖರೀದಿಸುವುದು ಅತ್ಯಗತ್ಯ. ತಾಮ್ರವನ್ನು ಸೇವಿಸುವ ಕುರಿತು ಇರುವ ಮಿಥ್ಯೆಗಳು
ನಮ್ಮ ದೇಹದಲ್ಲಿ ತಾಮ್ರವು ನೈಸರ್ಗಿಕವಾಗಿ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ನಮಗೆ ಆಹಾರ ಅಥವಾ ನೀರಿನ ಮೂಲಕವೇ ತಾಮ್ರದ ಪೂರೈಕೆಯಾಗೇಕು. ತಾಮ್ರದ ಅಂಶವಿರುವ ಆಹಾರದ ಸೇವನೆಗಿಂತಲೂ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಉತ್ತಮ ಮಾರ್ಗವಾಗಿದೆ.
ಅಲ್ಲದೆ, ಕೇವಲ ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದು ಸಾಕಾಗುವುದಿಲ್ಲ. ತಾಮ್ರದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ಎಂಟು ಗಂಟೆಗಳ ಕಾಲ ನೀರನ್ನು ಸಂಗ್ರಹಿಸಬೇಕು ಮತ್ತು ನಂತರ ಈ ನೀರನ್ನು ಸೇವಿಸಬೇಕು. ನೀರನ್ನು ಇನ್ನೂ ಹೆಚ್ಚು ಗಂಟೆ ಕಾಲ ಸಂಗ್ರಹಿಸಿಟ್ಟರೆ ಹೆಚ್ಚು ತಾಮ್ರದ ಅಂಶ ನೀರಿನಿಂದ ಹೀರಲ್ಪಡುತ್ತದೆ, ಮತ್ತು ಇದು ದೇಹಕ್ಕೆ ಪ್ರಯೋಜನಕಾರಿ ಯಾದ ಅನೇಕ ಅಮೂಲ್ಯವಾದ ಗುಣಗಳನ್ನು ಪಡೆಯುತ್ತದೆ.