ಕಡಲೆಕಾಯಿ ಬಾಯಿಗೆ ರುಚಿ, ದೇಹಕ್ಕೂ ಹಿತ. ಚಳಿಗಾಲದ ಈ ಅವಧಿಯಲ್ಲಿ ಕಡಲೇಕಾಯಿ ದೇಹಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ.
ಒಮ್ಮೆ ತಿನ್ನಹೊರಟರೆ ಕೈಗೂ ಬಾಯಿಗೂ ನಡುವಣ ಜಗಳಕ್ಕೆ ಅಂತ್ಯವೇ ಇಲ್ಲ. ಎದುರಿನಲ್ಲಿಟ್ಟ ಕಡ್ಲೆಕಾಯಿ ಮುಗಿಯುವ ತನಕ ಯಾವುದಕ್ಕೂ ಬಿಡುವಿಲ್ಲ. ಶೇಂಗಾದ ಆ ರುಚಿ ನಾಲಗೆಯಲ್ಲಿ ನಲಿಯುವಾಗ ಜಗತ್ತೇ ಮುಳುಗಿಹೋದರೂ ಗಮನಕ್ಕೆ ಬಾರದು. ಕಡಲೇಕಾಯಿಯ ಮಾಯೆಯೇ ಅಂಥದ್ದು. ಹಸಿಯಾಗಲಿ, ಹುರಿದ್ದೇ ಆಗಲಿ, ಬೇಯಿಸಿದ್ದ್ದೇ ಆಗಲಿ… ಕಡಲೆಕಾಯಿಯ ರುಚಿಗೆ ಸಾಟಿ ಬೇರಿಲ್ಲ.
ರುಚಿಯಷ್ಟೇ ಅಲ್ಲ, ಆರೋಗ್ಯದ ವಿಚಾರದಲ್ಲಿ ಶೇಂಗಾ ದೇಹಕ್ಕೆ ಪೂರಕ. ಸಿರಿವಂತರು ಬಾದಾಮಿ ಕೊಂಡು ತಿಂದರೆ ಬಡವರು ಕಡ್ಲೇಕಾಯಿ ಚಪ್ಪರಿಸುತ್ತಾರೆ. ಆದ್ದರಿಂದಲೇ ಇದು ಬಡವರ ಬಾದಾಮಿ. ಗಾಂಧೀಜಿಯವರೂ ಕಡಲೇಕಾಯಿಯನ್ನು ಬಹು ಪ್ರಿಯವಾಗಿ ಮೆಚ್ಚುತ್ತಿದ್ದರು. ಇದರಲ್ಲಿ ಅಧಿಕವಾಗಿರುವ ಪೋಷಕಾಂಶಗಳೇ ಇದಕ್ಕೆ ಬಾದಾಮಿಗೆ ಸರಿಗಟ್ಟುವ ಅಗ್ಗಳಿಕೆಯನ್ನು ತಂದುಕೊಟ್ಟಿದೆ.
ಪ್ರೊಟೀನ್ನ ಆಗರ: ಶೇಂಗಾ ಪ್ರೋಟಿನ್ನ ಆಗರ. ಚಳಿಗಾಲದಲ್ಲಿ ಇದರ ಸೇವನೆಯಿಂದ ದೇಹಕ್ಕೆ ಬೇಕಾದ ಕೊಬ್ಬಿನಾಂಶ ಸಿಗುತ್ತದೆ. ಇದನ್ನು ಹಸಿಯಾಗಿ, ಹುರಿದು, ಬೇಯಿಸಿ ತಿನ್ನಬಹುದು. ಅಥವಾ ಚಿಕ್ಕಿ, ಉಂಡೆ, ಬರ್ಫಿ, ಚಟ್ನಿ ಪುಡಿ. ಬೆಣ್ಣೆ ಮಾಡಿ ಸೇವಿಸಬಹುದು. ಶೇಂಗಾ ಬೀಜದಲ್ಲಿ ಫಾಲೆಟ್ ಅಂಶ ಅತ್ಯಧಿಕವಾಗಿದೆ. ಆದ್ದರಿಂದ ಇದರ ಮಹಿಳೆಯರಿಗೆ ವಿಶೇಷವಾಗಿ ಗರ್ಭಿಣಿಯರಿಗೆ ಒಳ್ಳೆಯದು. ಅಲ್ಲದೆ ಕಾಲು ಕಪ್ ಶೇಂಗಾ ಬೀಜ ಸೇವನೆಯಿಂದ ದೇಹಕ್ಕೆ ಬೇಕಾಗಿರುವ ಒಟ್ಟು ಮ್ಯಾಂಗನೀಸ್ನ ಶೇ. 35 ಭಾಗವನ್ನು ಪಡೆದುಕೊಳ್ಳಬಹುದು. ಮ್ಯಾಂಗನೀಸ್ ದೇಹದ ಚಯಾಪಚಯ ಕ್ರಿಯೆಗೆ, ಕ್ಯಾಲ್ಷಿಯಂ ಉತ್ಪತ್ತಿಗೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟದ ನಿಯಂತ್ರಣಕ್ಕೆ ಅತ್ಯಗತ್ಯವಾಗಿದೆ. ಶೇಂಗಾದಲ್ಲಿ ಟ್ರೈಪ್ಟಾಫನ್ ಎಂಬ ಅಂಶವಿದೆ. ಇದು ಮೆದುಳಿನಲ್ಲಿ ನಡವಳಿಕೆಯನ್ನು ನಿಯಂತ್ರಿಸುವ ಸಿರೊಟಿನ್ ಉತ್ಪತ್ತಿಗೆ ಅತ್ಯಗತ್ಯವಾಗಿರುವ ಅಮಿನೊ ಆ್ಯಸಿಡ್ ಆಗಿದೆ. ಆದ್ದರಿಂದ ಖಿನ್ನತೆ ಮುಂತಾದ ಸಮಸ್ಯೆಯಿದ್ದವರಿಗೆ ಶೇಂಗಾ ಬೀಜದ ಸೇವನೆ ಒಳ್ಳೆಯದು.
ಶೇಂಗಾವನ್ನು ಬ್ರೈನ್ ಫುಡ್ ಎಂದು ಕರೆಯಬಹುದು. ಯಾಕೆಂದರೆ ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಬಿ3 ಅಥವಾ ನಿಯಾಸಿನ್ ಎಂಬ ಅಂಶ ಇದ್ದು ಇದು ಮೆದುಳನ್ನು ಚುರುಕಾಗಿಸುತ್ತದೆ. ಇದು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಕೂಡಾ ಸಹಕಾರಿಯಾಗಿದೆ. ಇದರಲ್ಲಿರುವ ತಾಮ್ರದಂಶ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೊಗೊಳಿಸುತ್ತದೆ. ಶೇಂಗಾವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಹೃದಯಾಘಾತ ಇತ್ಯಾದಿ ಸಮಸ್ಯೆಗಳನ್ನೂ ತಪ್ಪಿಸಬಹುದು. ಆದ್ದರಿಂದ ವಾರಕ್ಕೆ ನಾಲ್ಕು ದಿನ ಒಂದು ಹಿಡಿ ಶೇಂಗಾ ಬೀಜವನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಕೆಲವು ಸಂಶೋಧನೆಗಳ ಪ್ರಕಾರ ಶೇಂಗಾವನ್ನು ಸೇವಿಸುತ್ತಿದ್ದರೆ ಆಲ್ಜೈಮರ್ ಮುಂತಾದ ಸಮಸ್ಯೆಯನ್ನೂ ತಡೆಗಟ್ಟಬಹುದು. ಇದರಲ್ಲಿರುವ ನಿಯಾಸಿನ್ ಅಂಶವೇ ಇದಕ್ಕೆ ಕಾರಣ. ಇಷ್ಟು ಮಾತ್ರವಲ್ಲ, ಶೇಂಗಾ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನೂ ಕಡಿಮೆ ಮಾಡಿಕೊಳ್ಳಬಹುದು.
ಕಡಲೆಬೀಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಇದೆ. ಕಪ್ಪು ದ್ರಾಕ್ಷಿ ಮತ್ತು ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಆಂಟಿಯಾಕ್ಸಿಡಂಟ್ ಕಡಲೆ ಬೀಜದಲ್ಲೂ ದೊರೆಯುತ್ತೆ. ಸೇಬು, ಕ್ಯಾರೆಟ್ ಮತ್ತು ಬೀಟ್ರೂಟ್ಗಿಂತ ಕಡಲೆ ಕಾಯಿಯಿಂದಲೇ ಹೆಚ್ಚಿನ ಉಪಯೋಗ ಪಡೆಯಬಹುದು. ಉಪ್ಪು ಬೆರೆಸದಿರುವ ಕಡಲೆ ಬೀಜ ರಕ್ತನಾಳಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಮೋನೊಸಾಚುರೇಟೆಡ್ ಫ್ಯಾಟ್ ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ
ಕಡಲೆ ಕಾಯಿಯಲ್ಲಿನ ವಿಟಮಿನ್ ಇ ಕ್ಯಾನ್ಸರ್ ಮತ್ತು ಹದಯ ಸಂಬಂಧಿ ಕಾಯಿಲೆಗಳನ್ನು ದೂರವಿರಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಿದೆ. ಕಡಲೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ಕೆಂಪು ರಕ್ತಕಣಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಕಡಲೆ ಕಾಯಿಯಲ್ಲಿ ಕ್ಯಾಲ್ಸಿಯಂ ಅಧಿಕವಿದೆ. ಆದ್ದರಿಂದ ಕಡಲೆ ಕಾಯಿ ಸೇವನೆ ಮೂಳೆ, ಎಲುಬುಗಳು ಗಟ್ಟಿಯಿರುವಂತೆ ನೋಡಿಕೊಳ್ಳುತ್ತದೆ. ಕಡಲೆ ಕಾಯಿಯಲ್ಲಿನ ಬಯೋಫ್ಲೇವನಾಯ್ಡ್ ಅಂಶ ಮೆದುಳಿನಲ್ಲಿ ರಕ್ತಸಂಚಲನವನ್ನು ಶೇಕಡಾ 30 ರಷ್ಟು ಹೆಚ್ಚಾಗಿಸಿ ಲಕ್ವ ಹೊಡೆಯುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಆಹಾರದಲ್ಲಿ ಸ್ವಲ್ಪವೇ ಕಡಲೆ ಕಾಯಿ ಅಥವಾ ಬೀಜ ಬಳಸಿದರೂ ಸರಿ ದೇಹದಲ್ಲಿ ತುಂಬಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲನ್ನು ಶೇಕಡಾ 14 ರಷ್ಟು ಕರಗಿಸುತ್ತದೆ. ನಾರಿನಂಶ-ಕಡಲೆ ಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದವರು ಇದರ ಸೇವನೆಯನ್ನು ಮಾಡಿದರೆ ಉತ್ತಮ. ಅಷ್ಟೇ ಅಲ್ಲ, ಕಡಲೆ ಕಾಯಿ ಸೇವನೆ ಪುರುಷ ಮತ್ತು ಸ್ರೀಯರ ಹಾರ್ಮೋನುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ನೂರು ಗ್ರಾಂ ಶೇಂಗಾದಲ್ಲಿರುವ ಪೋಷಕಾಂಶ ಹೀಗಿವೆ. ಕ್ಯಾಲರಿ -567, ಕೊಬ್ಬು -49 ಗ್ರಾಂ,ಸೋಡಿಯಂ -18 ಮಿ.ಗ್ರಾಂ
,ಕಾರ್ಬೊಹೈಡ್ರೇಟ್ -16 ಗ್ರಾಂ,ಪೊಟ್ಯಾಷಿಯಂ -705 ಮಿ.ಗ್ರಾಂ
,ನಾರು -8 ಗ್ರಾಂ,ಸಕ್ಕರೆ -4 ಗ್ರಾಂ,ಪ್ರೋಟಿನ್ -26 ಗ್ರಾಂ
ಏಲಕ್ಕಿಯು ಬಹಳಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಪ್ರತಿನಿತ್ಯ ಏಲಕ್ಕಿ ಸೇವಿಸುವುದರಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಅದರಲ್ಲೂ ರಾತ್ರಿ ಮಲಗುವುದಕ್ಕೂ ಮುನ್ನ ಏಲಕ್ಕಿ ಸೇವಿಸುವುದರಿಂದ ಸಿಕ್ಕಾಪಟ್ಟೆ ಲಾಭಗಳಿವೆ ಎನ್ನಲಾಗುತ್ತದೆ. ಏಳಕ್ಕಿಯನ್ನು ಅಡುಗೆಗೆ ಹಾಕುವುದರಿಂದ ಅಡುಗೆ ವಿಭಿನ್ನ ಸುವಾಸನೆಯನ್ನು ಹೊಂದುತ್ತದೆ. ಏಲಕ್ಕಿಯ ಹೆಚ್ಚಿನ ಲಾಭ ಪಡೆಯಬೇಕಾದರೆ ಅದನ್ನು ನೇರವಾಗಿ ಜಗಿದು ಸೇವಿಸುವುದು ಒಳ್ಳೆಯದು.
ಬಾಯಿ ದುರ್ವಾಸನೆಯಿಂದ ಮುಕ್ತಿ
ಏಲಕ್ಕಿ ಬಾಯಿಯ ದುರ್ವಾಸನೆ ಹೋಗಲಾಡಿಸಲು ಅತ್ಯಂತ ಸಹಕಾರಿ. ನೀವು ಕೆಲವರನ್ನು ನೋಡಿರಬಹುದು, ಊಟವಾದ ನಂತರ ಅಥವಾ ಬಾಯಿ ವಾಸನೆ ಬರುವಂತಹ ಏನಾದರೂ ಆಹಾರಗಳನ್ನು ಸೇವಿಸಿದರೆ , ಅಥವಾ ಧೂಮಪಾನ ಮಾಡಿದರೆ ಏಲಕ್ಕಿಯನ್ನು ಬಾಯಿಗೆ ಹಾಕಿ ಜಗಿಯುತ್ತಾರೆ. ಹೀಗೆ ಮಾಡುವುದರಿಂದ ಬಾಯಿ ವಾಸನೆ ದೂರವಾಗುತ್ತದೆ.
ರಾತ್ರಿ ಹಲ್ಲುಜ್ಜಿದ ನಂತರ, ಏಲಕ್ಕಿ ಬೀಜಗಳನ್ನು ಜಗಿಯಿರಿ. ಬೇಕಾದರೆ ಸ್ವಲ್ಪ ಬಿಸಿನೀರನ್ನು ಕುಡಿಯಿರಿ.
ನಿಮಗೆ ಏಲಕ್ಕಿ ಇಷ್ಟವಿಲ್ಲವೆಂದಾದರೆ ಏಲಕ್ಕಿ ಬೀಜಗಳನ್ನು ಜಗಿದು ಉಗಿಯಿರಿ. ಹೀಗೆ ಮಾಡುವುದರಿಂದ ಬಾಯಿಯ ಆರೋಗ್ಯ, ಬಾಯಿ ದುರ್ವಾಸನೆ, ವಸಡಿನ ಸಮಸ್ಯೆಗಳನ್ನೂ ನಿವಾರಿಸಿಕೊಳ್ಳಬಹುದು.
ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತದೆ
ಏಲಕ್ಕಿ ಸೇವನೆಯಿಂದ ಮಲಬದ್ಧತೆ, ಗ್ಯಾಸ್, ಅತಿಸಾರ, ಹೊಟ್ಟೆ ನೋವು ಇತ್ಯಾದಿಗಳನ್ನು ನಿವಾರಿಸಬಹುದು. ಸಣ್ಣ ಏಲಕ್ಕಿ ಸೇವನೆಯು ಜೀರ್ಣಕಾರಿ ಸಮಸ್ಯೆಗಳನ್ನು ಮತ್ತು ಉಬ್ಬುವಿಕೆಯನ್ನು ನಿವಾರಿಸುತ್ತದೆ. ರಾತ್ರಿ ಮಲಗುವ ಮೊದಲು ಏಲಕ್ಕಿ ಸೇವನೆಯು ಹೊಟ್ಟೆಯ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ತುಂಬಾ ಉಪಯುಕ್ತವಾಗಿದೆ. ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುವುದಲ್ಲದೆ ಹೊಟ್ಟೆಯ ಸೆಳೆತ, ಅಸಿಡಿಟಿ ಇತ್ಯಾದಿಗಳನ್ನು ಹೋಗಲಾಡಿಸಲು ಇದು ಸೂಕ್ತವಾಗಿದೆ.
ಚರ್ಮವು ಹೊಳೆಯುತ್ತದೆ
ಉಗುರು ಮೊಡವೆಗಳಿಂದ ತೊಂದರೆ ಇರುವವರು ರಾತ್ರಿ ಮಲಗುವ ಮುನ್ನ ಏಲಕ್ಕಿಯನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದಲ್ಲದೆ, ಏಲಕ್ಕಿ ಸೇವನೆಯು ದದ್ದುಗಳು ಅಥವಾ ಯಾವುದೇ ಚರ್ಮದ ಸೋಂಕು ಇತ್ಯಾದಿಗಳನ್ನು ತೊಡೆದುಹಾಕಬಹುದು. ಅಂತಹ ಪರಿಸ್ಥಿತಿಯಲ್ಲಿ, ಒಂದು ಅಥವಾ ಎರಡು ಏಲಕ್ಕಿಯನ್ನು ಚೆನ್ನಾಗಿ ಅಗಿಯಿರಿ ಮತ್ತು ಅದನ್ನು ಉಗುರು ಬೆಚ್ಚಗಿನ ನೀರಿನಿಂದ ಸೇವಿಸಿ. ಹೀಗೆ ಮಾಡುವುದರಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತವೆ.
ರಕ್ತ ಪರಿಚಲನೆ
ರಕ್ತ ಪರಿಚಲನೆಯಲ್ಲಿ ದೇಹವು ಸರಾಗವಾಗಿ ನಡೆಯಲು ಇದು ಅವಶ್ಯಕವಾಗಿದೆ. ಪೋಷಕಾಂಶಗಳು ರಕ್ತದ ಮೂಲಕ ದೇಹದ ಪ್ರತಿಯೊಂದು ಭಾಗವನ್ನು ತಲುಪುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೀವು ರಾತ್ರಿ ಮಲಗುವ ಮುನ್ನ ಏಲಕ್ಕಿಯನ್ನು ಸೇವಿಸಿ ಮತ್ತು ನಂತರ ಬೆಚ್ಚಗಿನ ನೀರನ್ನು ಸೇವಿಸಿದರೆ ಅದು ರಕ್ತವನ್ನು ಶುದ್ಧೀಕರಿಸುವುದಲ್ಲದೆ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಕೂದಲಿನ ಸಮಸ್ಯೆ ದೂರವಾಗುತ್ತದೆ
ಸಾಮಾನ್ಯವಾಗಿ ಕೂದಲು ಉದುರುವ ಸಮಸ್ಯೆಯಿಂದ ಜನರು ತೊಂದರೆಗೊಳಗಾಗುತ್ತಾರೆ. ಅಂತಹ ಜನರು ರಾತ್ರಿ ಮಲಗುವ ಮೊದಲು ಒಂದು ಅಥವಾ ಎರಡು ಏಲಕ್ಕಿಯನ್ನು ಚೆನ್ನಾಗಿ ಜಗಿದು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಕೂದಲಿನ ಬೇರುಗಳನ್ನು ಬಲಗೊಳ್ಳುವುದು ಮಾತ್ರವಲ್ಲದೆ ಕೂದಲು ಉದುರುವುದು ನಿಲ್ಲುತ್ತದೆ. ನೀವು ತಲೆಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆಯನ್ನು ಹೋಗಲಾಡಿಸಲು, ರಾತ್ರಿ ಮಲಗುವ ಮೊದಲು ಏಲಕ್ಕಿಯನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ.
ನಿದ್ದೆ ಚೆನ್ನಾಗಿ ಬರುತ್ತದೆ
ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ. ಅವರು ಎಷ್ಟೇ ಧಣಿದು ದುಡಿದರೂ ನಿದ್ದೆ ಸರಿಯಾಗಿ ಬರುವುದಿಲ್ಲ. ಅಂತಹವರು ರಾತ್ರಿ ಮಲಗುವುದಕ್ಕೂ ಮುನ್ನ ಒಂದು ಏಲಕ್ಕಿಯನ್ನು ಬಾಯಿಗೆ ಹಾಕಿ ಜಗಿದು ಉಗುರು ಬೆಚ್ಚಗಿನ ನೀರು ಕುಡಿದು ಮಲಗಬೇಕು.
ವಾಂತಿ ಸಮಸ್ಯೆ
ದೂರ ಪ್ರಯಾಣದ ಸಂದರ್ಭದಲ್ಲಿ ಕೆಲವರಿಗೆ ವಾಂತಿ ಬರುತ್ತದೆ. ಅಂತಹ ಸಂದರ್ಭದಲ್ಲಿ ಅಂತಹವರು ಒಂದು ಏಲಕ್ಕಿಯನ್ನು ಬಾಯಿಗೆ ಹಾಕಿಕೊಂಡು ಜಗಿದರೆ ವಾಂತಿಯ ಸಮಸ್ಯೆ ದೂರವಾಗುತ್ತದೆ.