ಹೂವುಗಳ ರಾಣಿ ಎಂದೇ ಕರೆಸಿಕೊಂಡಿರುವ ಗುಲಾಬಿ ನೋಡಲು ಮಾತ್ರ ಸುಂದರ ಎನ್ನುವಂತಿಲ್ಲ. ಅದು ಸಮೃದ್ಧವಾದ ಔಷಧೀಯ ಗುಣಗಳನ್ನು ತನ್ನಲ್ಲಡಗಿಸಿಕೊಂಡಿದೆ.
ಗುಲಾಬಿಯ ಸುವಾಸನೆ ಅಮಲನ್ನು ಕಡಿಮೆ ಮಾಡುತ್ತದೆ. ಗುಲಾಬಿಯ ಎಸಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗಾದಾಗ ಆ ನೀರಿನಿಂದ ಕಣ್ಣುಗಳನ್ನು ತೊಳೆದರೆ, ಕಣ್ಣಿನ ಉರಿ ಮಾಯವಾಗುತ್ತದೆ.
ಒಣಗಿದ ರೇಖುಗಳನ್ನು ಜೇನುತುಪ್ಪದೊಂದಿಗೆ ಕಲಸಿ ಸೇವಿಸುವುದರಿಂದ ಉದರಬೇನೆ ಗುಣವಾಗುತ್ತದೆ. ದೇಹದ ಉಷ್ಣತೆ ತಗ್ಗುತ್ತದೆ. ವೀಳ್ಯದೆಲೆಯೊಡನೆ ಗುಲಾಬಿಯ ರೇಖುಗಳನ್ನು ಸೇರಿಸಿ ತಿಂದರೆ ಬಾಯಿಯ ದುರ್ಗಂಧ ನೀಗುತ್ತದೆ.
ಒಂದು ಹಿಡಿಯಷ್ಟು ಗುಲಾಬಿ ಮೊಗ್ಗನ್ನು ಅರೆದು, ಮೊಸರಿನಲ್ಲಿ ಕಲಸಿ ಸೇವಿಸಿದರೆ ಶೀತಬಾಧೆ ನೀಗುತ್ತದೆ.
ಗುಲಾಬಿಯ ಎಸಳುಗಳನ್ನು ಮಡಿಕೆಯಲ್ಲಿ ಹಾಕಿ, ನೀರಿನಲ್ಲಿ ಕುದಿಸಿ, ಬೆಳಗ್ಗೆ ಮತ್ತು ರಾತ್ರಿ ಸಕ್ಕರೆ ಬೆರೆಸಿ ಕುಡಿದರೆ ಮಲಬದ್ಧತೆ ನೀಗುತ್ತದೆ. ಮೂಲ ರೋಗದ ಕಾವು ತಗ್ಗುತ್ತದೆ.
ಗುಲಾಬಿ ಹೂವಿನ ಕಷಾಯ ಮಾಡಿ ಹಸುವಿನ ಹಾಲು ಮತ್ತು ಸಕ್ಕರೆ ಬೆರೆಸಿ ಕುಡಿದರೆ ಪಿತ್ತದಿಂದ ಬರುವ ಕಣ್ಣು ಕತ್ತಲು ದೂರವಾಗುತ್ತದೆ. ಬಾಯಿಯ ಕಹಿ ನೀಗುತ್ತದೆ.
ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಗುಲ್ಕಂದ್ ಸೇವಿಸುತ್ತಾ ಬಂದರೆ ರಕ್ತಬೇಧಿ ನಿಲ್ಲುತ್ತದೆ. ಪಿತ್ತ ಸಂಕಟ ಇಲ್ಲವಾಗುತ್ತದೆ. ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಉದರ ಸಂಬಂಧವಾದ ಸಂಕಟಗಳು ಗುಣವಾಗುತ್ತವೆ. ಮೂಲವ್ಯಾಧಿ ವಾಸಿಯಾಗುತ್ತದೆ.
ಗುಲಾಬಿಯ ಮೊಗ್ಗಿನ ಪುಡಿ, ಜಾಯಿಕಾಯಿ ಪುಡಿ ಮಾಡಿ ನಿಂಬೆರಸದಲ್ಲಿ ಕಲಸಿ ಸ್ವಲ್ಪ ನೀರು ಬೆರೆಸಿ ಕುಡಿದರೆ ಎದೆನೋವು ನೀಗುತ್ತದೆ. ಗುಲಾಬಿಯ ಎಸಳಿನ ರಸಕ್ಕೆ ನೀರು ಬೆರೆಸಿ ಕುಡಿದರೂ ಎದೆನೋವು ಗುಣವಾಗುತ್ತದೆ.
ಸಮಪ್ರಮಾಣದ ಗುಲಾಬಿ ಮೊಗ್ಗು, ಅತಿಮಧುರ ಮತ್ತು ಸೋಂಪನ್ನು ಜಜ್ಜಿ ಹಾಲಿನಲ್ಲಿ ಕಲಸಿ ಕುಡಿದರೆ ಮಲಬದ್ಧತೆ ನೀಗುತ್ತದೆ.
ಗುಲಾಬಿಯ ರಸವನ್ನು ಒಳ್ಳೆಣ್ಣೆಯಲ್ಲಿ ಬೆರೆಸಿ, ಕಾಯಿಸಿ ಆರಿಸಿದ ಮೇಲೆ ಗಾಯದ ಮೇಲೆ ಬಳಿದರೆ ಗಾಯ ವಾಸಿಯಾಗುತ್ತದೆ.
ಗುಲಾಬಿಯ ರೇಖುಗಳನ್ನು ತಿಂದರೆ ಗಂಟಲು ಹುಣ್ಣು ಮಾಗುತ್ತದೆ. ಗುಲಾಬಿಯ ಸುಮಧುರ ಕಂಪು ತಲೆನೋವನ್ನು ಗುಣಪಡಿಸುತ್ತದೆ. ಆಯಾಸವನ್ನು ಪರಿಹರಿಸುತ್ತದೆ.