ಮನೆಯಲ್ಲಿ ಹಬ್ಬದ ಸಮಯದಲ್ಲಿ ಗಸಗಸೆ ಪಾಯಸ ಮಾಡಿದರೆ ಖುಷಿ ಆಗುತ್ತದೆ. ಇದನ್ನು ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುತ್ತಾರೆ. ಏಕೆಂದರೆ ಇದರಲ್ಲಿ ಬಳಸಿರುವ ಬಿಳಿ ಬಣ್ಣದ ಗಸಗಸೆ ಬೀಜಗಳು ಬಾಯಿಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ವಿವಿಧ ಬಗೆಯ ಅರೋಗ್ಯ ಪ್ರಯೋಜನವನ್ನು ಕೂಡ ನೀಡುತ್ತದೆ.
ಗಸಗಸೆ ಬೀಜದಲ್ಲಿ ಕ್ಯಾಲೋರಿ, ಪ್ರೋಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿವೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
ಗಸಗಸೆ ಬೀಜಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಗಸಗಸೆ ಬೀಜಗಳಲ್ಲಿ ಇರುವ ಕಬ್ಬಿಣ, ವಿಟಮಿನ್ ಮತ್ತು ಸತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಕೆಲಸ ಮಾಡುತ್ತದೆ. ರೋಗ ನಿರೋಧಕ ವ್ಯವಸ್ಥೆಯ ಪ್ರಬಲತೆಯು ದೇಹವನ್ನು ವಿವಿಧ ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ.
ಇನ್ನು ಗಸಗಸೆ ನೆನಸಿ ಪೇಸ್ಟ್ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆ ಆಗುತ್ತದೆ.ಗಸಗಸೆ ಬೀಜಗಳನ್ನು ತಿನ್ನುವುದರಿಂದ ದುರ್ಬಲ ಮೂಳೆಗಳು ಬಲಗೊಳ್ಳುತ್ತವೆ. ಗಸಗಸೆ ಬೀಜಗಳಲ್ಲಿ ಕ್ಯಾಲ್ಸಿಯಂ, ಸತು ಮತ್ತು ತಾಮ್ರದಂತಹ ಪೋಷಕಾಂಶಗಳು ಹೇರಳವಾಗಿವೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಬಹಳಷ್ಟು ಜನರಲ್ಲಿ ಇಂದಿಗೂ ಸಹ ರಾತ್ರಿಯಲ್ಲಿ ನಿದ್ರೆ ಬರುವುದಿಲ್ಲ ಎಂದು ಹೇಳುವ ಅಭ್ಯಾಸ ರೂಢಿಯಾಗಿಬಿಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಅವರ ದಿನನಿತ್ಯದ ಜೀವನಶೈಲಿ ಮತ್ತು ಆಹಾರ ಪದ್ಧತಿ ಎಂದು ನೇರವಾಗಿ ಹೇಳಬಹುದು.
ಬೆಳಗ್ಗಿನಿಂದ ಸಾಕಷ್ಟು ಒತ್ತಡದಲ್ಲಿ ದುಡಿದು ದಣಿದಿರುವ ಯಾರಿಗೆ ಆದರೂ ಸಹ ರಾತ್ರಿಯ ಸಮಯದಲ್ಲಿ ನೆಮ್ಮದಿಯ ನಿದ್ರೆ ಬರುತ್ತದೆ. ಆದರೆ ಕೆಲವರಿಗೆ ಇದು ಸಾಧ್ಯವೇ ಆಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಎಂದರೆ ದೇಹದಲ್ಲಿ ಉಂಟಾಗುವ ಕೆಲವೊಂದು ಹಾರ್ಮೋನುಗಳ ಬದಲಾವಣೆ ಎಂದು ಹೇಳಬಹುದು.
ಹಾಗಾಗಿ ಇದನ್ನು ಸರಿಪಡಿಸಿಕೊಳ್ಳಲು ಮೊದಲು ಮೆದುಳಿನ ಸಂಕೇತಗಳನ್ನು ನಿಯಂತ್ರಣ ಮಾಡುವ ಕೆಲಸ ಮಾಡಬೇಕು. ಅದಕ್ಕಾಗಿ ಗಸಗಸೆ ಸೇವನೆ ತುಂಬಾ ಅಗತ್ಯ ಎಂದು ಹೇಳಬಹುದು.
ಏಕೆಂದರೆ ಇದರಲ್ಲಿ ಕಂಡುಬರುವ ಕೆಲವೊಂದು ವಿಶೇಷ ಬಗೆಯ ಅಂಶಗಳು ಮೆದುಳಿನ ಸೂಚನೆ ಮತ್ತು ಸಂಕೇತಗಳನ್ನು ನರಮಂಡಲದ ಮೂಲಕ ಅಚ್ಚುಕಟ್ಟಾಗಿ ನಿಯಂತ್ರಣ ಮಾಡುತ್ತದೆ. ಇದರಿಂದ ದಿನಕಳೆದಂತೆ ಮೆದುಳಿನ ಕಾರ್ಯ ಚಟುವಟಿಕೆ ಹೆಚ್ಚಾಗುತ್ತದೆ.
ಬಹುತೇಕ ಜನರಿಗೆ ಮಲಬದ್ಧತೆ ಎನ್ನುವುದು ಶಾಪವಾಗಿ ಪರಿಣಮಿಸಿದೆ. ಹಾಗಾಗಿ ಇದರಿಂದ ಮೂಲವ್ಯಾಧಿ ಸಮಸ್ಯೆ ಕೂಡ ಕಂಡು ಬಂದು ಇನ್ನಿತರ ಆರೋಗ್ಯ ಸಮಸ್ಯೆಗಳಿಗೂ ಕೂಡ ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ನಾರಿನಂಶ ಹೆಚ್ಚಾಗಿರುವ ಆಹಾರಗಳನ್ನು ತಿನ್ನಬೇಕು ಎಂದು ವೈದ್ಯರು ಹೇಳುತ್ತಾರೆ. ನಾರಿನ ಅಂಶ ಹೆಚ್ಚಾಗಿರುವ ಅನೇಕ ಆಹಾರ ಪದಾರ್ಥಗಳಲ್ಲಿ ಗಸಗಸೆ ಕೂಡ ಒಂದು.
ಹಾಗಾಗಿ ನಿಮಗೆ ಒಂದು ವೇಳೆ ದೀರ್ಘಕಾಲದಿಂದ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ ಗಸಗಸೆಯನ್ನು ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರು ಮಾಡಿಕೊಂಡು ನೀವು ಆಹಾರ ಸೇವನೆ ಮಾಡುವ ಮುಂಚೆ ತಿನ್ನಬಹುದು. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ನಂಬಿಕೆ ಇಡಬಹುದು.
ಹೃದಯದ ಆರೋಗ್ಯವನ್ನು ಹೆಚ್ಚು ಮಾಡುವ ಅನೇಕ ಅಂಶಗಳು ಗಸಗಸೆಯಲ್ಲಿ ಕಂಡು ಬರುತ್ತವೆ. ಉದಾಹರಣೆಗೆ ರಕ್ತ ಸಂಚಾರಕ್ಕೆ ಅನುಕೂಲವಾಗುವ ಕೆಲವೊಂದು ಫ್ಯಾಟಿ ಆಮ್ಲಗಳು ಉದಾಹರಣೆಗೆ ಲಿನೊಲಿಕ್
ಆಮ್ಲ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಪರಿಶುದ್ಧವಾದ ರಕ್ತಸಂಚಾರವನ್ನು ಇಡೀ ದೇಹದ ತುಂಬಾ ಉಂಟಾಗುವಂತೆ ಮಾಡಿ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಇದರಿಂದ ಸಾಕಷ್ಟು ಬೇಗನೆ ರಕ್ತದ ಒತ್ತಡ ಸಹ ನಿಯಂತ್ರಣಕ್ಕೆ ಬಂದು ಆರೋಗ್ಯಕರವಾದ ಜೀವನ ನಿಮ್ಮದಾಗುತ್ತದೆ.
ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ಅದರ ಪ್ರಭಾವ ಗಂಟಲು ನಾಲಿಗೆ ಮತ್ತು ತುಟಿಗಳ ಮೇಲೆ ಹುಣ್ಣುಗಳ ರೂಪದಲ್ಲಿ ಕಂಡುಬರುತ್ತದೆ. ಸಾಧ್ಯವಾದಷ್ಟು ಬೇಗನೆ ಇದನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಏಕೆಂದರೆ ನಿರ್ಲಕ್ಷ್ಯ ಮಾಡಿದರೆ ಇದು ಮತ್ತೊಂದು ಬಗೆಯ ಸಮಸ್ಯೆಗೆ ತಿರುಗುವ ಸಾಧ್ಯತೆ ಇರುತ್ತದೆ.
ದೇಹದ ತಾಪಮಾನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಗಸಗಸೆ ನಿಮ್ಮ ದೇಹದ ಮೇಲೆ ತಂಪಿನ ಪ್ರಭಾವವನ್ನು ಉಂಟು ಮಾಡುತ್ತದೆ.
ಇದರಿಂದ ಕ್ರಮೇಣವಾಗಿ ಹುಣ್ಣುಗಳು ಮಾಯವಾಗುತ್ತವೆ ಎಂದು ತಿಳಿದವರು ಹೇಳುತ್ತಾರೆ. ಸ್ವಲ್ಪ ಸಕ್ಕರೆ ಜೊತೆಗೆ ಗಸಗಸೆಯನ್ನು ಜಗಿದು ತಿನ್ನುವುದರಿಂದ ಬಹಳ ಬೇಗನೆ ಬಾಯಿಯ ಹುಣ್ಣುಗಳು ವಾಸಿಯಾಗುತ್ತವೆ.