ವಿಶಾಖ ನಕ್ಷತ್ರದಲ್ಲಿ ಜನಿಸಿದವರ ಗುಣವಗುಣಗಳು ಹೇಗಿರುತ್ತದೆ ತಿಳಿಯಿರಿ!

0 3,619

ನಕ್ಷತ್ರಗಳ ಸಾಲಿನಲ್ಲಿ 16ನೇ ನಕ್ಷತ್ರವೇ ವಿಶಾಖ. ವಿಶಾಖ ನಕ್ಷತ್ರದವರು ತಮ್ಮ ಹೆಸರಿನ ಮೊದಲ ಅಕ್ಷರವನ್ನು ತಿ, ತು, ತೇ ಮತ್ತು ತೊ ಗಳಿಂದ ಆರಂಭಿಸಿದರೆ ಒಳ್ಳೆಯದಾಗುವುದು. ಜೈನರ ಏಳನೇ ತೀರ್ಥಂಕರರಾದ ಸುಪಾರ್ಶ್ವನಾಥ ಸ್ವಾಮಿ ಈ ನಕ್ಷತ್ರದಲ್ಲಿಯೇ ಜನಿಸಿದವರು. ವೈಶಾಖ ಹುಣ್ಣಿಮೆ ದಿನ ವಿಶಾಖ ನಕ್ಷತದ ದಿನವೇ ಗೌತಮ ಬುದ್ಧರ ಜನನ ಆಗಿದೆ. ಪ್ರಖ್ಯಾತ ರಾಜಕಾರಣಿಗಳಾದ ಈಗಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಜನಿಸಿದುದು ಈ ನಕ್ಷತ್ರದಲ್ಲಿ. ಅಲ್ಲದೇ ಇಬ್ಬರದ್ದೂ ವೃಶ್ಚಿಕ ರಾಶಿ ಆಗಿರುವುದು ಇನ್ನೊಂದು ವಿಶೇಷ.

ಈ ನಕ್ಷತ್ರದ ಚಿಹ್ನೆ ಕುಂಬಾರನ ಚಕ್ರ ರೂಪದಲ್ಲಿ 5 ನಕ್ಷತ್ರಗಳಿಂದ ಕೂಡಿರುತ್ತದೆ. ಹಾಗಾಗಿ ಪಂಚಮುಖಿ ರುದ್ರಾಕ್ಷಿ ಇವರಿಗೆ ಹಿಡಿಸಲಿದೆ. ಇಂದ್ರಾಗ್ನಿ ದೇವತೆ. ಸಾಲ ಕೊಡಲು ಈ ನಕ್ಷತ್ರ ಇರುವ ದಿನ ಉತ್ತಮ. ಆದರೆ ಯಾವುದೇ ಶುಭ ಕಾರ್ಯ, ವಿವಾಹಾದಿ ಮಂಗಳ ಕಾರ್ಯ, ಗೃಹ ಆರಂಭ ಮತ್ತು ಗೃಹ ಪ್ರವೇಶಗಳಿಗೆ ಉತ್ತಮ ದಿನವಲ್ಲ. ಆದರೆ ಔಷಧ ಅಂಗಡಿ ತೆರೆಯಲು, ಅಗ್ನಿ ಸಂಬಂಧ ವಸ್ತುಗಳ ವ್ಯವಹಾರ ಆರಂಭಿಸಲು, ಅಡುಗೆ ಅನಿಲ ವಿತರಿಸುವ ವ್ಯವಹಾರ ಆರಂಭಿಸಲು ಈ ನಕ್ಷತ್ರ ಬುಧವಾರ ಇದ್ದ ದಿನ ಉತ್ತಮ ಆಗಿದೆ. ಈ ದಿನ ಅಮೂಲ್ಯ ವಸ್ತು ಕಳೆದರೆ ಬೇಗನೇ ಸಿಗಲಿದೆ. ದೀರ್ಘ ರೋಗ ಚಿಕಿತ್ಸೆಗೆ ಮದ್ದು ಆರಂಭಿಸಲು ಉತ್ತಮ ದಿನ.

ಈ ನಕ್ಷತ್ರದಲ್ಲಿ ಜನಿಸಿದವರು ಸಿಡುಕು ಸ್ವಭಾವದವರೂ, ದರ್ಪದಿಂದ ಮಾತಾಡತಕ್ಕವರು, ಉತ್ತಮ ಆಡಳಿತದಾರರು, ನೇರ ನುಡಿ ಇರತಕ್ಕವರು ಆಗುವರು.ಸ್ತ್ರೀ ಆದರೆ ಧನಿಕಳು, ಧರ್ಮ ಬಗ್ಗೆ ಶ್ರದ್ಧೆ ಉಳ್ಳವಳೂ, ಬಂಧುವರ್ಗದವರ ಮೇಲೆ ಅಭಿಮಾನ ಉಳ್ಳವಳೂ, ಹಿರಿಯರಿಗೆ ವಂದಿಸತಕ್ಕವಳೂ ಆಗುವಳು.ಈ ನಕ್ಷತ್ರದಲ್ಲಿ ರಜಸ್ವಲೆ ಆದರೆ ಸಿಡುಕು ಉಳ್ಳವಳೂ, ಹಿಂದು ಮುಂದು ಯೋಚಿಸದವಳೂ, ಪರರಿಗೆ ನಿಂದಿಸತಕ್ಕವಳೂ, ಜಗಳಗಂಟಿ ಆಗುವಳು. ಇವಳಿಗೆ ಪುತ್ರ ಸಂತಾಪ ಫಲವಿದೆ.

ದ್ವಾದಶಿ ತಿಥಿ, ಗುರುವಾರ ಶತಭಿಷ ನಕ್ಷತ್ರ ಇರುವ ದಿನಗಳು ಘಾತ ಆಗಿರುತ್ತದೆ. 3, 12, 21 ಮತ್ತು 30 ತಾರೀಖು ಬುಧವಾರ ಇದ್ದ ದಿನ ಉತ್ತಮ.ವಿಶಾಖ ಬುಧವಾರ ಇದ್ದ ದಿನ ಉತ್ತಮ. ಅಮೃತ ಸಿದ್ಧಿಯೋಗ. ಆದರೆ ಭಾನುವಾರ, ಸೋಮವಾರ ಮತ್ತು ಮಂಗಳವಾರ ದಿನಗಳು ಉತ್ತಮವಲ್ಲ. ಯಾವ ಕಾರ್ಯವೂ ಮಾಡಬಾರದು.ಸಮಾಜದಲ್ಲಿ ಗುರುತಿಸತಕ್ಕ ಯೋಗ್ಯ ವ್ಯಕ್ತಿ ಆಗಬೇಕಾದರೆ ಹೆಸರನ್ನು ಸಾರ್ಥಕ ತಾರೆಗಳಾದ ಉತ್ತರ ಆಷಾಢ (ಜ, ಜಿ) ಕೃತ್ತಿಕೆ (ಅ, ಇ, ಉ) ಮತ್ತು ಉತ್ತರೆ (ಪ, ಪಿ) ಗಳಿಂದ ಆರಂಭದ ಹೆಸರು ಇಡತಕ್ಕದ್ದು.

ಅನುರಾಧಾ (ಬುಧವಾರ), ಪುಷ್ಯ (ಗುರುವಾರ) ಹೊಸ ಬಟ್ಟೆ ಧರಿಸಲು, ರತ್ನಗಳನ್ನು ಖರೀದಿಸಲು ಉತ್ತಮ ದಿನಗಳು.ಮೂಲ (ಭಾನುವಾರ) ಅಶ್ವಿನಿ (ಶುಕ್ರವಾರ) ಗೃಹಪ್ರವೇಶ, ಗೃಹ ಆರಂಭ, ವಾಹನಗಳ ಖರೀದಿ ಮಾಡಲು ಉತ್ತಮ ದಿನಗಳು.

ಉತ್ತರೆ (ಭಾನುವಾರ) ಉತ್ತರ ಆಷಾಢ (ಶುಕ್ರವಾರ) ಎಲ್ಲ ಕಾರ್ಯಗಳಿಗೆ ಉತ್ತಮ ದಿನಗಳು.ಜ್ಯೇಷ್ಠ, ರೇವತಿ ಮತ್ತು ಆಶ್ಲೇಷ ದಿನಗಳಲ್ಲಿ ದೂರದ ಪಯಣ ಮಾಡಬಾರದು. ಭರಣಿ ನಕ್ಷತ್ರದ ದಿನ ಶುಭ ಕಾರ್ಯ ಆರಂಭಿಸಬಾರದು. ಶ್ರವಣ, ಹಸ್ತ ಮತ್ತು ರೋಹಿಣಿ ದಿನಗಳಲ್ಲಿ ಜಾಗ್ರತೆ ಇರಬೇಕು.

5, 13, 34 ಮತ್ತು 70 ಕಂಟಕ ವರ್ಷಗಳು ಆಗಿದ್ದು ಪೂರ್ಣ ಆಯುಷ್ಯ 77 ವರ್ಷಗಳು.ಜನ್ಮ ನಕ್ಷತ್ರ ಎಂದರೆ ವಿಶಾಖದಲ್ಲಿ (ತಿ, ತು, ತೆ, ತೊ) ಹೆಸರಿದ್ದರೆ 3 ಕ್ಯಾರೆಟ್‌ನ ಕನಕಪುಷ್ಯರಾಗ ಹರಳಿನ ಉಂಗುರವನ್ನು ತೋರು ಬೆರಳಲ್ಲಿ ಧರಿಸತಕ್ಕದ್ದು.

ಈ ನಕ್ಷತ್ರ ಸಂಜಾತ ಸ್ತ್ರೀಯೊಡನೆ ವಿವಾಹವಾದರೆ ಮೈದುನನಿಗೆ ದೋಷವಿದೆ. ಹಾಗಾಗಿ ಹಿರಿಯವ ವರ ಸಿಕ್ಕಿದರೆ ಉತ್ತಮ. ಹುಣ್ಣಿಮೆ ದಿನ ವಿಶಾಖ ನಕ್ಷತ್ರ ಇದ್ದುದರಿಂದ ಮಾಸಕ್ಕೆ ವೈಶಾಖ ಎಂದು ಹೆಸರು ಬಂತು. ಈ ತಿಂಗಳು ತುಂಬಾ ಉಷ್ಣತೆ ಪ್ರಭಾವವಿದೆ. ಆದರೆ ಈ ತಿಂಗಳು ಭೂಮಿ ಕಾದರೆ ಉತ್ತಮ ಮಳೆ ಮುಂದೆ ಬರಲಿದ್ದು ಕೃಷಿ ಉತ್ಪತ್ತಿ ಹೆಚ್ಚು ಆಗಲಿದೆ. ವಿವಾಹಾದಿ ಮಂಗಳ ಕಾರ್ಯಗಳಿಗೆ ಈ ತಿಂಗಳು ಉತ್ತಮ.

ಈ ನಕ್ಷತ್ರದ ಕನ್ಯೆಗೆ ಕೃತಿಕೆ, ಆಶ್ಲೇಷ, ಉತ್ತರೆ, ಚಿತ್ರ, ಸ್ವಾತಿ, ಅನುರಾಧಾ, ಜ್ಯೇಷ್ಠ, ಧನಿಷ್ಠ, ಶತಭಿಷ ನಕ್ಷತ್ರಗಳ ವರನೊಡನೆ ವಿವಾಹ ಆಗಲು ಕೂಡಿ ಬರುತ್ತದೆ. ನಕ್ಷತ್ರದ 14ರಿಂದ 18 ಗಳಿಗೆಗಳು ವಿಷ ಕಾಲ ಆಗಿರುತ್ತದೆ. ಯಾವ ಕಾರ್ಯ ಮಾಡಬಾರದು.

Leave A Reply

Your email address will not be published.