ಹೆಣ್ಮಕ್ಕಳು ಉಗುರನ್ನು ಉದ್ದವಾಗಿ ಬೆಳೆಸುವ ಮುನ್ನ ಎಚ್ಚರ!

ನಮ್ಮ ತಲೆಯ ರಕ್ಷಣೆಗೆ ಕೂದಲು ಹಾಗೂ ನಮ್ಮ ಬೆರಳುಗಳ ರಕ್ಷಣೆಗೆ ಉಗುರುಗಳನ್ನು ದೇವರೇ ನಮಗೆ ಕೊಟ್ಟಿರುವ ವರ ಎಂದು ಹೇಳಬಹುದು. ಏಕೆಂದರೆ ಈ ಭಾಗಗಳು ತುಂಬಾ ಸೂಕ್ಷ್ಮ. ಪೆಟ್ಟು ಬಿದ್ದರೆ ಎಡವಟ್ಟು ಖಂಡಿತ.

ಹಾಗಾಗಿ ರಕ್ಷಣೆಯ ವಿಚಾರವಾಗಿ ಕೆಲಸಕ್ಕೆ ಬರುವ ನಮ್ಮ ಉಗುರು ಮತ್ತು ತಲೆ ಕೂದಲನ್ನು ನಾವು ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡಿರುತ್ತೇವೆಯೋ ಅಷ್ಟೂ ನಮಗೆ ಒಳ್ಳೆಯದು. ಸ್ವಲ್ಪ ಯಾಮಾರಿದರೂ ನಮ್ಮ ಆರೋಗ್ಯ ಅಪಾಯ ಖಂಡಿತ. ಅದರಲ್ಲೂ ಕರೋನ ವೈರಸ್ ಎಂಬ ಮಹಾಮಾರಿ ಶರವೇಗದಲ್ಲಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ಕೊಡಲೇಬೇಕು.

ಉಗುರುಗಳನ್ನು ಉದ್ದ ಬಿಡಬೇಡಿ!

ನಮ್ಮ ಬೆರಳುಗಳಲ್ಲಿ ಕಂಡುಬರುವ ಉಗುರುಗಳ ಹಿಂಭಾಗದಲ್ಲಿ ಸಾಕಷ್ಟು ನಮ್ಮ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳು ಮತ್ತು ಇನ್ನಿತರ ಸೂಕ್ಷ್ಮಾಣುಗಳು ಬೆಳವಣಿಗೆ ಹೊಂದುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಹಾಗಾಗಿ ಚಿಕ್ಕ ವಯಸ್ಸಿನಿಂದ ನಮಗೆ ಉಗುರು ಕತ್ತರಿಸುವ ಅಭ್ಯಾಸವನ್ನು ಮನೆಯಲ್ಲಿನ ಹಿರಿಯರು ಹೊಡೆದು, ಬೈದು ಮಾಡಿಸಿರುತ್ತಾರೆ.

ಆದರೆ ದೊಡ್ಡವರಾಗುತ್ತಿದ್ದಂತೆ ಕೇವಲ ನಮ್ಮ ಮನಸ್ಸಿನ ಮಾತನ್ನು ಮಾತ್ರ ಕೇಳಲು ಬಯಸುವ ನಾವು ನಮಗೆ ಬೇಕಾದ ಹಾಗೆ ನಮ್ಮ ಜೀವನವನ್ನು ರೂಪಿಸಿ ಕೊಳ್ಳುವುದರ ಜೊತೆಗೆ ನಮ್ಮ ಜೀವನ ಶೈಲಿಯನ್ನು ಕೂಡ ಬದಲಾಯಿಸಿಕೊಳ್ಳುತ್ತೇವೆ. ಕೆಲವರಿಗಂತೂ ತಮ್ಮ ಕೈ ಬೆರಳುಗಳ ಉಗುರುಗಳನ್ನು ಉದ್ದವಾಗಿ ಬಿಟ್ಟು ಇತರರಿಗೆ ತೋರಿಸಿಕೊಳ್ಳುವ ಶೋಕಿ ಇರುತ್ತದೆ.

ನೆನಪಿಡಿ ಉಗುರು ಉದ್ದ ಬಿಟ್ಟರೆ, ಸಮಸ್ಯೆಯೇ ಹೆಚ್ಚು!
ಆದರೆ ಉಗುರು ಉದ್ದ ಬಿಡುವ ಪ್ರತಿಯೊಬ್ಬರೂ ಗಿನ್ನಿಸ್ ರೆಕಾರ್ಡ್ ಮಾಡಲು ಸಾಧ್ಯವಿಲ್ಲ ಎಂಬುದು ಹಲವರಿಗೆ ಅರಿವಿಗೆ ಬರುವುದೇ ಇಲ್ಲ. ಹೀಗಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ.

ಕೈ ಬೆರಳುಗಳ ಹಾಗೂ ಕಾಲಿನ ಬೆರಳುಗಳ ಉಗುರುಗಳನ್ನು ಉದ್ದವಾಗಿ ಬೆಳೆಸುವುದರ ಪರಿಣಾಮ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಈ ಲೇಖನದಲ್ಲಿ ಕುಲಂಕುಶವಾಗಿ ತಿಳಿಸಿಕೊಡಲಾಗಿದೆ.

ಬ್ಯಾಕ್ಟೀರಿಯಾ ಸೋಂಕು ಉಂಟಾಗುತ್ತದೆ

ಉದ್ದನೆಯ ಉಗುರು ಬೆಳೆಸಬೇಕೆಂಬ ಹಂಬಲ ಹೊಂದಿರುವವರಿಗೆ ಈ ವಿಚಾರ ಅರ್ಥವಾಗಬೇಕು. ಏನೆಂದರೆ ಉಗುರು ಉದ್ದ ಬಿಟ್ಟು ಮೇಲೆ ಅದಕ್ಕೆ ನೈಲ್ ಪಾಲಿಶ್ ಹಾಕಿ ಸಿಂಗಾರ ಮಾಡಿದರೆ ನೋಡಲು ಚೆನ್ನಾಗಿ ಏನೋ ಕಾಣುತ್ತದೆ.

ಆದರೆ ಉಗುರಿನ ಹಿಂಭಾಗದಲ್ಲಿ ಸಾಕಷ್ಟು ಧೋಳು ಮತ್ತು ಕೊಳೆ ನಮ್ಮ ಮೈ ಬೆವರಿನ ಜೊತೆ ಸೇರಿಕೊಂಡು ಬೆರಳು ಮತ್ತು ಉಗುರಿನ ಸಂಧುಗಳಲ್ಲಿ ಸೇರಿಕೊಂಡಿರುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೆ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮ ರೋಗಾಣುಗಳು ಧೂಳಿಗೆ ಸಾಕಷ್ಟು ಆಕರ್ಷಿತವಾಗುತ್ತವೆ.

ಇದು ಕೇವಲ ಕೈ ಬೆರಳುಗಳ ವಿಚಾರದಲ್ಲಿ ಮಾತ್ರವಲ್ಲ. ಕಾಲು ಬೆರಳುಗಳ ಉಗುರುಗಳನ್ನು ಉದ್ದ ಬಿಡುವವರಿಗೂ ಕೂಡ ಇದು ತಿಳಿದಿರಬೇಕು. ಕಾಲಿನ ಬೆರಳುಗಳ ಉಗುರು ಉದ್ದ ಬಿಟ್ಟು ಕಾಲಿಗೆ ಶೂ ಹಾಕಿಕೊಂಡರೆ ಬೆರಳುಗಳ ಮಧ್ಯೆ ಹೆಚ್ಚಿನ ಒತ್ತಡ ಉಂಟಾಗಿ ಗಾಳಿಯ ಹರಿಯುವಿಕೆ ಪ್ರಮಾಣ ಕಡಿಮೆಯಾಗುತ್ತದೆ.

ಹೀಗಾಗಿ ಬೆವರಿನ ಅಂಶ ಹೆಚ್ಚು ಉತ್ಪತ್ತಿಯಾಗುವುದರಿಂದ ಬ್ಯಾಕ್ಟೀರಿಯಾಗಳಿಗೆ ಮತ್ತು ಸೋಂಕು ಕಾರಕ ಸೂಕ್ಶ್ಮಾಣುಗಳಿಗೆ ಬೆಳವಣಿಗೆಯಾಗಲು ಒಳ್ಳೆಯ ವಾತಾವರಣವನ್ನು ನೀವೇ ನಿರ್ಮಾಣ ಮಾಡಿಕೊಟ್ಟಂತೆ ಆಗುತ್ತದೆ. ಇದರಿಂದ ಕಾಲುಗಳ ಬೆರಳುಗಳಲ್ಲಿ ಬ್ಯಾಕ್ಟೀರಿಯಾ ಸೋಂಕು ಉಂಟಾಗುತ್ತದೆ.

ಫಂಗಲ್ ಇನ್ಫೆಕ್ಷನ್ ಕೂಡ ಉಂಟಾಗುತ್ತದೆ

ಅಥ್ಲೇಟ್ಸ್ ಫುಟ್ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬೇಕು. ಇದು ಚರ್ಮದ ಮೇಲೆ ಉಂಟಾಗುವ ಫಂಗಲ್ ಸೋಂಕು ಎಂದು ಕರೆಯಲ್ಪಡುತ್ತದೆ. ಕಾಲಿನ ಚರ್ಮದ ಮೇಲೆ ಅದರಲ್ಲೂ ಮುಖ್ಯವಾಗಿ ಬೆರಳುಗಳ ಮಧ್ಯದಲ್ಲಿ ಫಂಗೈ ಸೋಂಕು ಉಂಟಾದರೆ ಅದನ್ನು ಫಂಗಲ್ ಇನ್ಫೆಕ್ಷನ್ ಎಂದು ಕರೆಯುತ್ತಾರೆ.

ಕಾಲು ಬೆರಳುಗಳ ಉಗುರುಗಳನ್ನು ಉದ್ದವಾಗಿ ಬೆಳೆಸುವ ಶೋಕಿ ಹೊಂದಿರುವವರಿಗೆ ಈ ಸಮಸ್ಯೆ ಸಾಮಾನ್ಯ ಎಂದು ಹೇಳಬಹುದು.

ಮನುಷ್ಯನ ದೇಹದ ಮೇಲೆ ಹೆಚ್ಚಿನ ಧೂಳು ಮತ್ತು ಕೊಳೆ ಅಂಶ ಎಲ್ಲಿ ಕಂಡುಬರುತ್ತದೆಯೋ, ಅಲ್ಲಿ ಬ್ಯಾಕ್ಟೀರಿಯ ಮತ್ತು ಸೂಕ್ಷ್ಮ ರೋಗಾಣುಗಳ ಜೊತೆ ಫಂಗಸ್ ಕೂಡ ಬೆಳವಣಿಗೆ ಹೊಂದುತ್ತದೆ. ಹಾಗಾಗಿ ಸಾಧ್ಯವಾದಷ್ಟು ಉಗುರುಗಳನ್ನು ಕತ್ತರಿಸಿ ನಮ್ಮ ದೇಹವನ್ನು ನಾವು ಸದಾ ಶುಚಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು.

ಫುಡ್ ಪಾಯಿಸನಿಂಗ್ ಗೆ ಕಾರಣವಾಗುತ್ತದೆ

ಇನ್ನು ಆಹಾರ ಸೇವನೆಯ ವಿಚಾರಕ್ಕೆ ಬಂದಾಗ ಉದ್ದನೆಯ ಉಗುರುಗಳನ್ನು ಹೊಂದಿರುವ ಕೈ ಬೆರಳುಗಳಿಂದ ಯಾವುದೇ ಬಗೆಯ ಆಹಾರವನ್ನು ತಿನ್ನುವುದರಿಂದ ಉಗುರಿನ ಹಿಂಭಾಗದಲ್ಲಿರುವ ಬ್ಯಾಕ್ಟೀರಿಯಾ ಸಹಿತ ಧೂಳು ಮತ್ತು ಕೊಳೆ ನೇರವಾಗಿ ನಿಮ್ಮ ಆಹಾರದ ಮೂಲಕ ನಿಮ್ಮ ದೇಹ ಸೇರುತ್ತದೆ.

ಅಂದರೆ ನೀವೇ ನಿಮ್ಮ ಕೈಯಾರೆ ರೋಗ ಕಾರುವ ಬ್ಯಾಕ್ಟೀರಿಯ ಹಾಗು ಸೂಕ್ಷ್ಮಾಣುಗಳನ್ನು ನಿಮ್ಮ ದೇಹ ಸೇರಿಸಕೊಳ್ಳುತ್ತಿದ್ದೀರಿ ಎಂದರ್ಥ. ಇದರಿಂದ ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯಕ್ಕೆ ಫುಡ್ ಪಾಯಿಸನಿಂಗ್ ಸಮಸ್ಯೆ ತಂದೊಡ್ಡುವಲ್ಲಿ ಯಾವುದೇ ಅನುಮಾನವಿಲ್ಲ.

ಆದ್ದರಿಂದ ಅಡುಗೆಮನೆಯಲ್ಲಿ ಆಹಾರ ತಯಾರಿಸುವ ಮುಂಚೆ ಮತ್ತು ಡೈನಿಂಗ್ ಟೇಬಲ್ ಮೇಲೆ ಕುಳಿತು ಆಹಾರ ಸೇವಿಸಲು ಆಹಾರ ತಟ್ಟೆಗೆ ಕೈ ಹಾಕುವ ಮುಂಚೆ ಕೈ ಗಳನ್ನು ಮತ್ತು ಉಗುರು ಕಣ್ಣುಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ನಂತರ ಆಹಾರ ಸೇವನೆ ಮಾಡಬೇಕು.

ಗಾಯಗಳಾಗುವ ಸಂಭವ ಹೆಚ್ಚಿರುತ್ತದೆ

ಕೈ ಗಳಲ್ಲಿ ಉಗುರು ಉದ್ದವಾಗಿದ್ದರೆ ಎಂದಾದರೂ ನಮ್ಮ ಅಜಾಗರೂಕತೆಯಿಂದ ನಮಗೆ ನಾವೇ ಗಾಯ ಮಾಡಿಕೊಳ್ಳುತ್ತೇವೆ ಅಥವಾ ನಮ್ಮಿಂದ ಇನ್ನೊಬ್ಬರಿಗೆ ಖಂಡಿತ ತೊಂದರೆಯಾಗುತ್ತದೆ.

ಅದರಲ್ಲೂ ಮುಖ್ಯವಾಗಿ ಕಣ್ಣುಗಳಿಗೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ಉಗುರು ಉದ್ದ ಬಿಟ್ಟಿರುವ ಪ್ರತಿಯೊಬ್ಬರು ಈ ಒಂದು ವಿಚಾರವಾಗಿ ಯೋಚನೆ ಮಾಡಬೇಕು. ತಮಾಷೆಗಾಗಿ ಉಗುರು ಬಿಟ್ಟು ನಂತರ ಅನಾಹುತ ಮಾಡಿಕೊಳ್ಳುವ ಅಥವಾ ಮಾಡುವ ತೊಂದರೆ ಬೇಡವೇ ಬೇಡ.

ಉಗುರು ಒಳಮುಖವಾಗಿ ಬೆಳೆಯಲು ಪ್ರಾರಂಭಿಸುತ್ತದೆ

ಸಾಮಾನ್ಯವಾಗಿ ಈ ಸಮಸ್ಯೆ ಕಾಲುಗಳ ಉಗುರುಗಳನ್ನು ಉದ್ದವಾಗಿ ಬಿಟ್ಟಿರುವವರಿಗೆ ಕಂಡು ಬರುತ್ತದೆ ಎಂದು ಹೇಳುತ್ತಾರೆ.

ಉಗುರು ಉದ್ದವಾಗಿ ಬೆಳೆಯುತ್ತ ಹೋದಂತೆ ಅದರ ಸುತ್ತಲಿನ ಅಂಚುಗಳು ಒಳಮುಖವಾಗಿ ಅಂದರೆ ಬೆರಳುಗಳ ಚರ್ಮಕ್ಕೆ ಚುಚ್ಚುವಂತೆ ಬೆಳವಣಿಗೆಯಾಗಲು ಪ್ರಾರಂಭ ಮಾಡುತ್ತವೆ.

ಇದರಿಂದ ಬೆರಳಿನ ಚರ್ಮ ಕೆಂಪು ಬಣ್ಣಕ್ಕೆ ತಿರುಗಿ, ಮೆತ್ತಗಾಗಿ ಕೆಲವೊಂದು ಕಡೆ ರಕ್ತ ಸುರಿಯುವ ಸಂಭವ ಹೆಚ್ಚಾಗುತ್ತದೆ. ಇದು ತುಂಬಾ ಗಂಭೀರ ಪ್ರಕರಣ ಎಂದು ಹೇಳಬಹುದು.

ಸ್ವಚ್ಛತೆಯ ಅಭಾವವನ್ನು ಎತ್ತಿತೋರಿಸುತ್ತದೆ

ಉಗುರುಗಳನ್ನು ಉದ್ದ ಬೆಳೆಸಿ ನಾನು ಸ್ವಚ್ಛತೆ ಕಾಪಾಡಿಕೊಳ್ಳುತ್ತೇನೆ ಎಂದರೆ ಅದು ಸಾಧ್ಯವಿಲ್ಲದ ಮಾತು. ಏಕೆಂದರೆ ಉದ್ದವಾಗಿ ಬೆಳೆದ ಉಗುರಿನ ಹಿಂಭಾಗದಲ್ಲಿ ಧೂಳು ಮತ್ತು ಕೊಳೆ ಎಷ್ಟೇ ಬಾರಿ ಸ್ವಚ್ಛ ಮಾಡಿದರೂ ಮತ್ತೆ ಮತ್ತೆ ಬಂದು ಕೂರುತ್ತದೆ.

ಹೀಗಾಗಿ ಬ್ಯಾಕ್ಟೀರಿಯ ಮತ್ತು ಸೂಕ್ಷ್ಮ ರೋಗಾಣುಗಳು ನಮಗೆ ಅರಿವಿಲ್ಲದಂತೆ ಬೆಳವಣಿಗೆ ಕಂಡು ನಮ್ಮ ಆರೋಗ್ಯವನ್ನು ಹದಗೆಡಿಸುತ್ತವೆ.

Related Post

Leave a Comment