ಹಾಲಿನ ಜೊತೆ ಖರ್ಜುರ ಹೀಗೆ ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತೇ!

ರಾತ್ರಿ ಮಲಗುವ ಸಂದರ್ಭದಲ್ಲಿ ಒಂದು ಲೋಟ ಹಾಲು ಕುಡಿದು ಮಲಗಬೇಕು ಎಂದು ಹೇಳುತ್ತಾರೆ. ಏಕೆಂದರೆ ಇದರಿಂದ ಸಾಕಷ್ಟು ಲಾಭವಿದೆ. ಗರ್ಭಿಣಿ ಮಹಿಳೆಯರು ಹಾಲಿಗೆ ಕೇಸರಿ ಹಾಕಿ ಕುಡಿದು ಮಲಗಬೇಕು. ಪುಟ್ಟಮಕ್ಕಳು ಬಾದಾಮಿ ಹಾಲು ಕುಡಿಯಬೇಕು.

ಹಾಗೆ ದೇಹದಲ್ಲಿ ಅತಿಯಾದ ಉಷ್ಣಾಂಶ ಹೊಂದಿರುವವರು ಹಾಲಿಗೆ ಕಲ್ಲುಸಕ್ಕರೆ ಹಾಕಿಕೊಂಡು ಕುಡಿಯುವುದು ಎಲ್ಲಾ ಕಡೆ ಚಾಲ್ತಿಯಲ್ಲಿರುವ ಅಭ್ಯಾಸ. ಆದರೆ ಹಾಲಿನ ಜೊತೆ ಖರ್ಜೂರಗಳನ್ನು ನೆನೆಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅಪಾರವಾದ ಪ್ರಯೋಜನಗಳು ಸಿಗುತ್ತವೆ.

ಹೊಟ್ಟೆಯ ಭಾಗದಿಂದ ಹಿಡಿದು ಕರುಳಿನವರೆಗೂ ಖರ್ಜೂರ ಗಳ ಪ್ರಭಾವ ಇರುತ್ತದೆ. ಅಷ್ಟೇ ಅಲ್ಲದೆ ಮಧುಮೇಹ ಸಮಸ್ಯೆಯನ್ನು ಹೊಂದಿದವರು ಹಾಲಿಗೆ ಸಕ್ಕರೆ ಹಾಕಿಕೊಳ್ಳುವ ಬದಲು ಖರ್ಜೂರಗಳನ್ನು ಹಾಕಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಯಾವುದೇ ಕಾರಣಕ್ಕೂ ಏರಿಕೆ ಕಾಣುವುದಿಲ್ಲ.

ಆಶ್ಚರ್ಯಕರವಾದ ರೀತಿಯಲ್ಲಿ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಖರ್ಜೂರ ಮಿಶ್ರಿತ ಹಾಲನ್ನು ಕುಡಿಯುವುದರಿಂದ ಉಂಟಾಗುತ್ತದೆ.

ದೀರ್ಘಕಾಲದಿಂದ ಯಾರು ರಾತ್ರಿ ಹೊತ್ತು ನಿದ್ರೆ ಬರದೇ ತಡವರಿಸುತ್ತಾರೆ ಅಂತಹವರಿಗೆ ಖರ್ಜೂರದಿಂದ ಪರಿಹಾರ ಸಿಗುತ್ತದೆ. ಅತಿಯಾದ ಕೆಮ್ಮು, ದೈಹಿಕ ಆಯಾಸ ಇತ್ಯಾದಿ ಸಮಸ್ಯೆಗಳಿಗೆ ಹಾಲಿನಲ್ಲಿ ನೆನೆಸಿದ ಖರ್ಜೂರ ಉತ್ತರವಾಗಿ ನಿಲ್ಲುತ್ತದೆ.

​ಕೆಮ್ಮಿನ ಸಮಸ್ಯೆಗೆ ರಾಮಬಾಣ

ಇದಕ್ಕೆ ಪರಿಹಾರ ಎಂದರೆ ಖರ್ಜೂರವನ್ನು ಜೇನುತುಪ್ಪ ಮತ್ತು ಉಗುರುಬೆಚ್ಚಗಿನ ತಾಪಮಾನದಲ್ಲಿರುವ ಬಿಸಿ ಹಾಲಿನಲ್ಲಿ ನೆನಸಬೇಕು.ಇದು ಕಫವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲದಿಂದ ಇರುವ ಕೆಮ್ಮನ್ನು ಹೋಗಲಾಡಿಸುತ್ತದೆ. ಸಾಧ್ಯವಾದರೆ ಹಾಲಿನ ಜೊತೆ 10 ಖರ್ಜೂರಗಳನ್ನು ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

​ಈ ಸಮಸ್ಯೆಗಳಿಗೂ ಪರಿಹಾರ

ಮೊದಲೇ ಹೇಳಿದಂತೆ ಖರ್ಜೂರ ಗಳನ್ನು ಹಾಲಿನಲ್ಲಿ ನೆನೆಸಿ ಸೇವನೆ ಮಾಡುವುದರಿಂದ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಾಗೂ ಮಕ್ಕಳಿಗೆ ಬಹುತೇಕ ಆರೋಗ್ಯ ಲಾಭಗಳನ್ನು ನಿರೀಕ್ಷೆ ಮಾಡಬಹುದು.ಆರೋಗ್ಯ ತಜ್ಞರು ಹೇಳುವ ಹಾಗೆ ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿ ಮಹಿಳೆಯರು, ನರಗಳ ದೌರ್ಬಲ್ಯದಿಂದ ಬಳಲುತ್ತಿರುವ ಮಕ್ಕಳು ಹಾಗೂ ವೃದ್ಧರು ಜೊತೆಗೆ ನಿಮಿರುವಿಕೆಯ ಅಪಸಾಮಾನ್ಯ ಸಮಸ್ಯೆಯಿಂದ ಬಳಲುವ ಪುರುಷರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಸುಮಾರು 24 ಗಂಟೆಗಳ ಕಾಲ ಹಾಲಿನಲ್ಲಿ ನೆನೆಸಿದ ಖರ್ಜೂರ ಗಳನ್ನು ಸೇವನೆ ಮಾಡಬೇಕು.

ಬೇಕೆಂದರೆ ಹಾಲಿನಲ್ಲಿ ನೆನೆಸಿದ ಖರ್ಜೂರಗಳ ಸಮೇತ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಕೇಸರಿ ಮತ್ತು ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿ 1 ಟೀ ಚಮಚ ತುರಿದ ಶುಂಠಿಯನ್ನು ಹಾಕಿಕೊಂಡು ಹಾಲು ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು.

​ನಿದ್ರಾಹೀನತೆ ಸಮಸ್ಯೆಗೆ ಸುಲಭ ಪರಿಹಾರ

ವಯಸ್ಸಾದ ವೃದ್ಧರು ಸಾಮಾನ್ಯವಾಗಿ ನಿದ್ರಾಹೀನತೆ ಸಮಸ್ಯೆಯಿಂದ ಪ್ರತಿದಿನ ಬಳಲುತ್ತಾರೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರಾದರೂ ವಯಸ್ಸಾದವರು ಇದ್ದರೆ ಮತ್ತು ಅವರಿಗೆ ಕಫ ಸಮಸ್ಯೆ ಇದ್ದರೆ, ಅಂತಹವರಿಗೆ ಪ್ರತಿದಿನಒಂದು ಚಿಕ್ಕ ಲೋಟದಲ್ಲಿ ಹಾಲನ್ನು ಬಿಸಿ ಮಾಡಿ ಅದರಲ್ಲಿ ಎರಡರಿಂದ ಮೂರು ಖರ್ಜೂರಗಳನ್ನು ಹಾಕಿ ನೆನೆಸಿ ತಿನ್ನಲು ಕೊಡಿ. ಇದು ಬಹಳ ಬೇಗನೆ ಪರಿಣಾಮ ಬೀರಿ ನಿದ್ರಾಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

​ಹೃದಯಕ್ಕೆ ತುಂಬಾ ಸಹಕಾರಿ

ಹಾಲಿನಲ್ಲಿ ನೆನೆಸಿದ ಖರ್ಜೂರಗಳನ್ನು ಸೇವನೆ ಮಾಡುವುದರಿಂದ ಸರಿಯಾದ ಪ್ರಮಾಣದಲ್ಲಿ ಹೃದಯಬಡಿತ ಇರುತ್ತದೆ ಎಂದು ಹೇಳುತ್ತಾರೆ. ಇದರಿಂದ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಅಚ್ಚುಕಟ್ಟಾಗಿ ನಿಯಂತ್ರಣ ಆಗುತ್ತದೆ.

ಒಂದು ವೇಳೆ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಸುಮಾರು ಅರ್ಧ ಲೋಟ ಹಾಲಿನಲ್ಲಿ ಎರಡು ಖರ್ಜೂರಗಳು ಮತ್ತು 2 ಟೀ ಚಮಚ ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.

​ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ

ಇರಿಟೇಬಲ್ ಬೋವಲ್ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಮತ್ತು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ತಮ್ಮ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಲು ಸುಮಾರು

ಐದರಿಂದ ಎಂಟು ಖರ್ಜೂರಗಳನ್ನು ಅರ್ಧ ಲೀಟರ್ ಹಾಲಿನಲ್ಲಿ ನೆನೆಸಿ ಬೇಯಿಸಿ ಅದನ್ನು ತಣ್ಣಗಾದ ಮೇಲೆ ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಬೆಳಗಿನ ಉಪಾಹಾರದ ಸಮಯದಲ್ಲಿ ಬೇಕಾದರೂ ಇದನ್ನು ಸೇವನೆ ಮಾಡಬಹುದು.

​ಬಿಪಿ ಇರುವವರಿಗೆ ತುಂಬಾ ಒಳ್ಳೆಯದು

ಯಾರು ಈಗಾಗಲೇ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಅಂತಹವರಿಗೆ ಸುಮಾರು 50ರಿಂದ 70 ಗ್ರಾಂ ಖರ್ಜೂರಗಳನ್ನು ಬೆಳಗಿನ ಸಮಯದ ಉಪಹಾರದ ಅರ್ಧಗಂಟೆ ಮುಂಚೆ ಹಾಲಿನಲ್ಲಿ ಹಾಕಿ ನೆನೆಸಿ ಸುಮಾರು

ಮೂರು ವಾರಗಳ ತನಕ ಸೇವನೆ ಮಾಡಲು ಕೊಡಬಹುದು. ಇದರಿಂದ ಕ್ರಮೇಣವಾಗಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

​ಅಜೀರ್ಣತೆ ಮತ್ತು ಎದೆಯುರಿ ಪರಿಹಾರವಾಗುತ್ತದೆ

ನಿಮ್ಮ ಮನೆಯಲ್ಲಿ ಒಂದು ವೇಳೆ ಕಪ್ಪು ಜೀರಿಗೆ ಲಭ್ಯವಿದ್ದರೆ, ಅದರ ಜೊತೆ ಒಣ ಖರ್ಜೂರಗಳನ್ನು ಚೆನ್ನಾಗಿ ಕುಟ್ಟಿ ಮಿಶ್ರಣ ಮಾಡಿಕೊಳ್ಳಿ.ಆದರೆ ನೆನಪಿರಲಿ ಖರ್ಜೂರಗಳ ಪ್ರಮಾಣ ನೀವು ತೆಗೆದುಕೊಂಡ ಜೀರಿಗೆಗಿಂತ ದುಪ್ಪಟ್ಟಾಗಿ ಇರಬೇಕು. ಇದನ್ನು ಹಾಗೆ ಕೂಡ ತಿನ್ನಬಹುದು.ಬೇಕೆಂದರೆ ಇದಕ್ಕೆ ಒಂದು ಲೋಟ ಹಾಲು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಬಹುದು. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಹೇಳಬಹುದು.

​ವಿಪರೀತ ದೈಹಿಕ ಆಯಾಸ ಪರಿಹಾರವಾಗುತ್ತದೆ

ಚೆನ್ನಾಗಿ ಆಹಾರ ಸೇವನೆ ಮಾಡಿದರೂ ಕೂಡ ಕೆಲವರಿಗೆ ದೈಹಿಕ ಆಯಾಸ ಮತ್ತು ಆಗಾಗ ನಿತ್ರಾಣ ಎದುರಾಗುವುದು ಸಾಮಾನ್ಯವಾಗಿರುತ್ತದೆ.

ಇದನ್ನು ಪರಿಹಾರ ಮಾಡಿಕೊಳ್ಳಲು ಖರ್ಜೂರಗಳನ್ನು ಹಾಲಿನಲ್ಲಿ ಹಾಕಿ ನೆನೆಸಿ ಅವುಗಳನ್ನು ಸೇವನೆ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ಇದು ದೇಹಕ್ಕೆ ಹೊಸ ಚೈತನ್ಯ ಮತ್ತು ಹುರುಪನ್ನು ನೀಡುತ್ತದೆ ಎಂದು ಹೇಳುತ್ತಾರೆ.

​ಬಾಣಂತಿಯರಿಗೆ ತುಂಬಾ ಉಪಯೋಗ

ಖರ್ಜೂರಗಳನ್ನು ಸೇವನೆ ಮಾಡುವ ಬಾಣಂತಿ ಮಹಿಳೆಯರಿಗೆ ಮಗುವಿಗೆ ಹಾಲುಣಿಸಲು ಬೇಕಾದ ಪ್ರಮಾಣದಲ್ಲಿ ಹಾಲಿನ ಉತ್ಪತ್ತಿ ಆಗುತ್ತದೆ ಎಂದು ತಿಳಿದುಬಂದಿದೆ.

ಹಾಗಾಗಿ ಇಡೀ ರಾತ್ರಿ ಹಸುವಿನ ಹಾಲಿನಲ್ಲಿ ನೆನೆ ಹಾಕಿದ ಖರ್ಜೂರಗಳನ್ನು ಬೆಳಗಿನ ಸಮಯದಲ್ಲಿ ಬಾಣಂತಿ ಮಹಿಳೆಯರು ಸೇವನೆ ಮಾಡಬಹುದು ಮತ್ತು ತಮ್ಮ ಹಾಗೂ ತಮ್ಮ ಮಗುವಿನ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

Related Post

Leave a Comment